ಬೆಂಗಳೂರು: ಸಂಸತ್ ಮೇಲಿನ ದಾಳಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಂದ ಉತ್ತರ ಕೇಳಿದಕ್ಕೆ ವಿಪಕ್ಷಗಳ 146 ಸಂಸದರನ್ನು ಸಂಸತ್ ಕಲಾಪದಿಂದ ಅಮಾನತು ಮಾಡಲಾಗಿದೆ. ಇದು ಖಂಡನೀಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸಂಸದರ ಅಮಾನತು ಖಂಡಿಸಿ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಿ.ಕೆ. ಶಿವಕುಮಾರ್, ಕೇಂದ್ರದ ಬಿಜೆಪಿ ಸರ್ಕಾರ ದೇಶದ ಇತಿಹಾಸದಲ್ಲಿ ದಾಖಲಾಗುವಂತಹ ಕೆಲಸವನ್ನು ಸಂಸತ್ತಿನ ಉಭಯ ಸದನಗಳಲ್ಲಿ ಸ್ಪೀಕರ್ ಅವರಿಂದ ಮಾಡಿಸಿದೆ. ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗೆ ಭಂಗವಾಗುತ್ತಿದೆ. ಸಂಸತ್ ಭದ್ರತಾ ಲೋಪದ ಬಗ್ಗೆ ಸರ್ಕಾರ ಅಧಿಕೃತ ಹೇಳಿಕೆಯನ್ನು ಸದನದಲ್ಲಿ ನೀಡಬೇಕು ಎಂದು ನಾವು ಆಗ್ರಹಿಸಿದೆವು. ಈ ಬಗ್ಗೆ ಹೇಳಿಕೆ ನೀಡಲು ಅವರಿಂದ ಸಾಧ್ಯವಾಗದೇ ವಿಪಕ್ಷಗಳ ಸಂಸತ್ ಸದಸ್ಯರನ್ನು ಅಮಾನತು ಮಾಡಿ ತಮಗೆ ಬೇಕಾದ ಮಸೂದೆ ಮಂಡನೆ ಮಾಡಿ ಅನುಮೋದನೆ ಪಡೆದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಅಪಮಾನ ಎಂದು ಕಿಡಿಕಾರಿದರು.
ನೂತನ ಸಂಸತ್ ಭವನದಲ್ಲಿ ವಿರೋಧ ಪಕ್ಷದ ಸಂಸದರ ವಿರುದ್ಧ ದಾಳಿ ನಡೆದಿದೆ. ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯ ಗೆದ್ದಿದ್ದೇವೆ, ನಾವು ಏನು ಬೇಕಾದರೂ ಮಾಡಬಹುದು ಎಂದು ಬಿಜೆಪಿ ನಾಯಕರು ಬೀಗುತ್ತಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆಯೋ ಇಲ್ಲವೋ? ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ದುರಾಡಳಿತ, ಸಂವಿಧಾನ ವಿರೋಧಿ ನೀತಿ ಖಂಡಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಈ ಹೋರಾಟವನ್ನು ನಾವು ಜನರ ಮಧ್ಯೆ ತೆಗೆದುಕೊಂಡು ಹೋಗುತ್ತೇವೆ ಎಂದರು.