![](https://kannadadunia.com/wp-content/uploads/2025/01/dks-shivakumar.jpg)
ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಕೆ ದರ ಇಳಿಸುವಂತೆ ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಮೆಟ್ರೋ ಪ್ರಯಾಣ ದರ ಏರಿಕೆ ನಮ್ಮ ತೀರ್ಮಾನವಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮೆಟ್ರೋ ಟಿಕೆಟ್ ದರ ಏರಿಕೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿದೆ ಎನ್ನುವ ಬಿಜೆಪಿಯವರ ಆರೋಪದಲ್ಲಿ ಹುರುಳಿಲ್ಲ. ಬಿಜೆಪಿಯವರಿಗೆ ರಾಜಕೀಯ ಹೊರತಾಗಿ ಬೇರೇನೂ ಗೊತ್ತಿಲ್ಲ. ಯಾರು ಬೇಕಾದರೂ ಸಂಸತ್ತಿನಲ್ಲಿ ಮಾತನಾಡಲಿ, ಇಲ್ಲಿ ಪ್ರತಿಭಟನೆ ಮಾಡಲಿ, ಗಲಾಟೆ ಮಾಡಲಿ. ಆದರೆ ಮೆಟ್ರೋ ಯೋಜನೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಶೇ 50:50 ಅನುಪಾತದಲ್ಲಿ ಮಾಡಲಾಗಿರುತ್ತದೆ. ಇದು ನಮ್ಮ ತೀರ್ಮಾನವಲ್ಲ ಎಂದರು.
ಮೆಟ್ರೋ ಪ್ರಯಾಣ ದರ ಏರಿಕೆಗೆ ಒಂದು ಸಮಿತಿ ಮಾಡಲಾಗಿದೆ. ಕೇಂದ್ರ ಸರ್ಕಾರ ಹೈಕೋರ್ಟ್ ನ್ಯಾಯಧೀಶರ ನೇತೃತ್ವದಲ್ಲಿ ಸಮಿತಿ ಮಾಡಿರುತ್ತಾರೆ. ಆ ಸಮಿತಿಯ ತೀರ್ಮಾನ ನಮ್ಮ ಗಮನಕ್ಕೂ ಬರುವುದಿಲ್ಲ, ದರ ಏರಿಕೆ ತೀರ್ಮಾನ ಅವರು ಮಾಡುತ್ತಾರೆ ಎಂದರು.
ಡಬಲ್ ಡೆಕ್ಕರ್ ಸೇರಿದಂತೆ ಬೆಂಗಳೂರಿನ ಮೆಟ್ರೋವನ್ನು ಇನ್ನೂ ಹೆಚ್ಚಿನ ಭಾಗಕ್ಕೆ ವಿಸ್ತರಣೆ ಮಾಡಬೇಕಿದೆ. ಮೆಟ್ರೋ ಜೊತೆಗೆ ಮೇಲ್ಸೆತುವೆ ನಿರ್ಮಾಣಕ್ಕೆ ಬಿಬಿಎಂಪಿಯಿಂದ ಶೇ 50 ರಷ್ಟು ವೆಚ್ಚವನ್ನು ಭರಿಸುವುದಾಗಿ ನಾವು ತಿಳಿಸಿದ್ದೇವೆ. ಏಕೆಂದರೆ ರಸ್ತೆ ವಿಸ್ತರಣೆ ಮಾಡಬೇಕು ಎಂದರೆ ಭೂಸ್ವಾಧಿನಕ್ಕೆ ಹೆಚ್ಚು ಖರ್ಚು ಆಗುತ್ತದೆ. ಕಟ್ಟಡಗಳನ್ನು ಒಡೆದುಹಾಕಿ ರಸ್ತೆ ವಿಸ್ತರಿಸುವುದು ಹೆಚ್ಚು ತ್ರಾಸದಾಯಕ. ಇದನ್ನು ಪ್ರಾಯೋಗಿಕವಾಗಿ ರಾಗಿಗುಡ್ಡ ಜಂಕ್ಷನ್ ಬಳಿ ಮಾಡಿದ್ದೇವೆ ಎಂದು ತಿಳಿಸಿದರು.
ಇನ್ನು ನೀರಿನ ದರ ಏರಿಕೆ ಮಾಡಿ 14 ವರ್ಷವಾಗಿದೆ. ಅದಕ್ಕೆ ಲೀಟರ್ ಗೆ 1 ಪೈಸೆಯಷ್ಟು ದರ ಏರಿಕೆ ಪ್ರಸ್ತಾವನೆ ನನ್ನ ಮುಂದೆ ಬಂದಿದೆ. ಪರಿಶೀಲನೆ ಮಾಡಿ ತೀರ್ಮಾನ ಮಾಡಲಾಗುವುದು” ಎಂದು ಹೇಳಿದರು.