
ಬೆಂಗಳೂರು: ಚಿತ್ರರಂಗದವರ ನಟ್ಟು, ಬೋಲ್ಟ್ ಟೈಟ್ ಮಾಡಬೇಕು ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ. ಇದೀಗ ಡಿ.ಕೆ.ಶಿವಕುಮಾರ್ ಪದ ಬಳಕೆ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಧು ಬಂಗಾರಪ್ಪ, ಡಿ.ಕೆ.ಶಿವಕುಮಾರ್ ನಟ್ಟು, ಬೋಲ್ಟು ಎಂಬ ಆ ಪದ ಬಳಸಬಾರದಿತ್ತು. ನಾನೊಬ್ಬ ಸಿನಿಮಾ ಇಂಡಸ್ಟ್ರಿಯವನಾಗಿ ಇದನ್ನು ಒಪ್ಪಲ್ಲ ಎಂದು ಹೇಳಿದ್ದಾರೆ.
ಸಿನಿಮಾ ಇಂಡಸ್ಟ್ರಿ ಎಂದರೆ ಎಲ್ಲರೂ ಇರ್ತಾರೆ. ಶಿವಣ್ಣ ಕೂಡ ಇರುತ್ತಾರೆ. ಆ ಪದ ಕಲಾವಿದರೂ ಮಾತ್ರವಲ್ಲ ಯಾರಿಗೇ ಆದರೂ ನೋವಾಗುತ್ತೆ. ಹೋರಾಟಕ್ಕೆ ಬಂದಿಲ್ಲ ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಆ ಪದ ಬಳಕೆ ಮನಸ್ಸಿಗೆ ನೋವಾಗುವಂತದ್ದು. ಡಿ.ಕೆ.ಶಿವಕುಮಾರ್ ಹೇಳಿದ ಅರ್ಥ ಸರಿಯಿದೆ. ಆದರೆ ಪದ ಬಳಕೆ ಸರಿಯಿಲ್ಲ ಬೇರೆ ರೀತಿಯಲ್ಲಿಯೂ ಹೇಳಬಹುದಿತ್ತು ಎಂದು ಹೇಳಿದರು.