
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಅಜಿತ್ ಪವಾರ್ ಹಾಗೂ ಏಕನಾಥ ಶಿಂಧೆಯಂತಹವರು ಇದ್ದಾರೆ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಅವರು ಮೇಧಾವಿಗಳು. ಅವರಿಗೆ ಅನುಭವ ಹೆಚ್ಚಾಗಿದೆ. ಜೋತಿಷ್ಯ ಗೊತ್ತಿದೆ. ಅವರ ನುಡಿಮುತ್ತುಗಳನ್ನು ನಾವು ಸಂತೋಷದಿಂದ ಕೇಳುತ್ತಿದ್ದೇವೆ ಎಂದು ಟಾಂಗ್ ನೀಡಿದರು.
ಹೆಚ್.ಡಿ.ಕುಮಾರಸ್ವಾಮಿ ಅವರ ಬಾಯಿಗೆ ಬೀಗ ಹಾಕುವ ಶಕ್ತಿ ನನ್ನಲ್ಲಿಲ್ಲ. ಅವರು ಮಾತನಾಡುತ್ತಿರಬೇಕು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದನ್ನು ಅವರಿಂದ ಸಹಿಸಲಾಗುತ್ತಿಲ್ಲ. ಅವರಿಗೆ ಅಧಿಕಾರ ಸಿಗಲಿಲ್ಲ ಎಂಬ ಹತಾಶೆಯಿಂದ ಏನೇನೋ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು.
ಇದೇ ವೇಳೆ ಬರಗಾಲದ ಸಮಯದಲ್ಲೂ ಸಿಎಂ ಸಿದ್ದರಾಮಯ್ಯ ಜೆಟ್ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ ಎಂಬ ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಸಮಯ ಉಳಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳು ವಿಮಾನಗಳಲ್ಲಿ ಓಡಾಡುವುದು ಸಹಜ ಎಂದರು.