ಬೆಂಗಳೂರು: ಲೋಕಸಭಾ ಚುನಾವಣಾ ಅಖಾಡ ರಂಗೇರಿದೆ. ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತೋಟದ ಮನೆಯಲ್ಲಿ ಭೋಜನ ಕೂಟ, ಮದ್ಯದ ವಾಸನೆ ಎಂಬ ಕಾಂಗ್ರೆಸ್ ಆರೋಪಕ್ಕೆ ಕಿಡಿಕಾರಿದ ಹೆಚ್.ಡಿ.ಕೆ ಪಾದಯಾತ್ರೆ ಹೆಸರಲ್ಲಿ ರಸ್ತೆಯಲ್ಲಿ ತೂರಾಡಿದ್ದು ಯಾರು ಎಂದು ವಾಗ್ದಾಳಿ ನಡೆಸಿದ್ದರು.
ಹೆಚ್.ಡಿ.ಕೆ ಹೇಳಿಕೆಗೆ ತಿರುಗೇಟು ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ನಾನು ಪಾದಯಾತ್ರೆ ಮಾಡಿದ್ದು ನಿಜವಲ್ಲವೇ? ಮೇಕೆದಾಟು ಪಾದಯಾತ್ರೆ ವೇಳೆ ನಾನು ತೂರಾಡಿದ್ದೇನೆಯೇ? ಅವರು ಏನಾದರೂ ಹೇಳಿಕೊಳ್ಳಲಿ. ಜನಕ್ಕೆ ಎಲ್ಲವೂ ಗೊತ್ತಿದೆ. ನಾನು ಪಾದಯಾತ್ರೆ ಮಾಡಿದ್ದೇನೆ ತಾನೆ, ಅವರು ಮಾಡಲಿ. ನಾನು ಕುಡಿದು ತೂರಾಡಿದ್ದೇನೆಯೇ? ನಾನು ಪಾದಯಾತ್ರೆಯಲ್ಲಿ ನಡೆದು ಸುಸ್ತಾಗಿ ತೂರಾಡಿದ್ದೇನೆ. ಕುಮಾರಸ್ವಾಮಿ ಅವರು ಅಲ್ಲಿ ನಡೆದಿದ್ದರೆ ಅವರಿಗೆ ಗೊತ್ತಾಗುತ್ತಿತ್ತು ಎಂದು ಹೇಳಿದ್ದಾರೆ.
ಈ ನಾಡು, ಕಾವೇರಿ ಜಲಾನಯನ ಪ್ರದೇಶದ ಜನರಿಗಾಗಿ ಈ ಹೋರಾಟ ಮಾಡಿದ್ದೇನೆ. ನಾನು ಈ ವಿಚಾರದಲ್ಲಿ ಅವರಿಗೆ ಸವಾಲು ಹಾಕುವುದಿಲ್ಲ. ನಾನು ಸವಾಲು ಹಾಕಿ ಅವರ ಆರೋಗ್ಯ ಹೆಚ್ಚುಕಮ್ಮಿ ಆದರೆ ನಾನು ಜವಾಬ್ದಾರಿ ತೆಗುಕೊಳ್ಳುವುದಿಲ್ಲ. ಅವರು ಧೈರ್ಯವಾಗಿ ಚುನಾವಣೆ ಮಾಡುತ್ತಿದ್ದಾರೆ ಅದಕ್ಕೆ ಶುಭ ಕೋರುತ್ತೇನೆ ಎಂದರು.
ಬೆಂಗಳೂರಿನ ನಗರದಲ್ಲಿ ಎದುರಾಗಿರುವ ನೀರಿನ ಪರಿಸ್ಥಿತಿಗೆ ಪರಿಹಾರವಾಗಿ ಮುಂದೆ ಬೆಂಗಳೂರಿನ ಎಲ್ಲಾ ಕೆರೆಗಳಿಗೆ ಶುದ್ಧೀಕರಿಸಿದ ನೀರು ತುಂಬಿಸಲು ಚಿಂತನೆ ನಡೆಸುತ್ತಿದ್ದೇವೆ. ಆ ಮೂಲಕ ಬೆಂಗಳೂರಿನ ಕೆರೆ ಉಳಿಸಿ ಅಂತರ್ಜಲ ಹೆಚ್ಚಿಸಲು ಮುಂದಾಗಿದ್ದೇವೆ. ಈ ಬಾರಿ 6,900 ಕೊಳವೆ ಬಾವಿ ಬತ್ತಿ ಹೋಗಿದ್ದು, ಈ ಪರಿಸ್ಥಿತಿ ಸುಧಾರಿಸಬೇಕಿದೆ. ಮುಂದಿನ ಕೆಲವು ದಿನಗಳಲ್ಲಿ ಮಳೆ ಬರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮಳೆ ಬರಲಿ ಎಂದು ಎಲ್ಲರೂ ಪ್ರಾರ್ಥಿಸೋಣ ಎಂದರು.