ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ಅವರ ರಾಜಕಾರಣ ಅವರಿಗೇ ಗೊತ್ತು. ನಮಗೆ ಗೊತ್ತಿಲ್ಲ. ಅವರ ರಾಜಕೀಯವೇ ಬೇರೆ, ಅವರ ಪಕ್ಷ ಹಾಗೂ ಕಾರ್ಯಕರ್ತರ ರಾಜಕಾರಣವೇ ಬೇರೆ. ಎನ್ ಡಿಎ ಮೈತ್ರಿ ರಾಜಕಾರಣವೇ ಬೇರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಯೋಗೇಶ್ವರ್ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ನಾನು ಯೋಗೇಶ್ವರ್ ಅವರನ್ನು ಭೇಟಿ ಮಾಡಿಲ್ಲ, ಮಾತೂ ಆಡಿಲ್ಲ. ಸ್ವಾತಂತ್ರ್ಯದಿನಾಚರಣೆ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗೆ ನೀಡಬೇಕಾದ ಗೌರವ ಕೊಟ್ಟಿದ್ದೇನೆ. ಅದರ ಹೊರತಾಗಿ ನಮ್ಮ ಮಧ್ಯೆ ಯಾವುದೇ ಭೇಟಿ, ಚರ್ಚೆ ನಡೆದಿಲ್ಲ ಎಂದು ಅಧಿಕೃತವಾಗಿ ಹೇಳುತ್ತಿದ್ದೇನೆ. ಕುಮಾರಸ್ವಾಮಿ ಅವರಿಗೆ ಮಾಹಿತಿ ಇದ್ದರೆ ಮಾತನಾಡಿಕೊಳ್ಳಲಿ. ನನಗೂ ಬೇಕಾದಷ್ಟು ಮಾಹಿತಿಗಳಿವೆ. ಬೇರೆ ಪಕ್ಷದವರನ್ನು ಸಂಪರ್ಕಿಸುವ ಅವಶ್ಯಕತೆ ಸಧ್ಯಕ್ಕಿಲ್ಲ ಎಂದು ನಾನು ನಮ್ಮ ಪಕ್ಷದವರಿಗೂ ಹೇಳಿದ್ದೇನೆ ಎಂದರು.
ಚನ್ನಪಟ್ಟಣದಲ್ಲಿ ಶಾಸಕ ಸ್ಥಾನ ಖಾಲಿಯಾದಾಗಿನಿಂದ ನಾವು ಕೆಲಸ ಮಾಡಿಕೊಂಡು ಕಾರ್ಯಕರ್ತರನ್ನು ಸಜ್ಜುಮಾಡಿಕೊಂಡು ಬಂದಿದ್ದೇನೆ. ನಾನು ಅವರ ಪಕ್ಷ ಹಾಗೂ ಎನ್ ಡಿಎ, ಕುಮಾರಸ್ವಾಮಿ, ಯೋಗೇಶ್ವರ್, ದಳದ ವಿಚಾರವಾಗಿ ಮಾತನಾಡುವುದಿಲ್ಲ. ಕಳೆದ ಐದು ವರ್ಷಗಳಿಂದ ಕುಮಾರಸ್ವಾಮಿ ಅವರು ಆಡಿರುವ ಮಾತುಗಳನ್ನು ನೋಡಿಕೊಂಡು ಬನ್ನಿ. ಅವರು ಎಂದಿಗೂ ತಮ್ಮ ಮಾತಿಗೆ ಬದ್ಧವಾಗಿ ನಿಂತಿಲ್ಲ. ಹೀಗಾಗಿ ಅವರ ನಿಲುವಿನ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಸಾರ್ವಜನಿಕವಾಗಿ ಮಾತನಾಡುವುದೇ ಬೇರೆ, ಆಂತರಿಕವಾಗಿ ಮಾತನಾಡುವುದೇ ಬೇರೆ. ಆ ರೀತಿ ಮಾತನಾಡುವುದೇ ಅವರ ತಂತ್ರಗಾರಿಕೆ ಇರಬಹುದು. ಅದಕ್ಕೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ. ನಮ್ಮ ಕಾರ್ಯಕರ್ತರನ್ನು ಕರೆಸಿ ಯಾರೇ ನಿಂತರೂ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಅವರಿಗೆ ಸೂಚನೆ ನೀಡಿದ್ದೇವೆ ಎಂದರು.
ಜೆಡಿಎಸ್ ಪಕ್ಷ ದುರ್ಬಲ ಎಂದು ನಾನು ಭಾವಿಸಿದರೆ ನನ್ನಂತ ಮೂರ್ಖ ಇನ್ಯಾರು ಇಲ್ಲ. ಆದರೆ ಕುಮಾರಸ್ವಾಮಿ ಇಷ್ಟು ದುರ್ಬಲರಾಗುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಕೇಂದ್ರ ಸಚಿವರಾಗಿರುವ ಅವರು ಎಲ್ಲರ ಕೈಕಾಲು ಕಟ್ಟಿಕೊಂಡು ನಮ್ಮ ಚಿಹ್ನೆಯಿಂದ ಸ್ಪರ್ಧೆ ಮಾಡಿ ಎಂದು ಬಿಜೆಪಿಯವರಿಗೆ ಹೇಳುವಷ್ಟು ದುರ್ಬಲರಾಗಿದ್ದಾರೆ ಎಂದು ಭಾವಿಸಿರಲಿಲ್ಲ ಎಂದು ಲೇವಡಿ ಮಾಡಿದರು.