ಬೆಂಗಳೂರು: ಬೆಂಗಳೂರಿನಲ್ಲಿ ಒಂದೇ ದಿನದ ವರುಣನ ಅಬ್ಬರಕ್ಕೆ ಭಾರತದ ಸಿಲಿಕಾನ್ ವ್ಯಾಲಿಯ ಮೂಲಸೌಕರ್ಯ ವ್ಯವಸ್ಥೆ ತತ್ತರಿಸಿ ಹೋಗಿದೆ. ರಾಜ್ಯ ಕಾಂಗ್ರೆಸ್ ಸರಕಾರದ ದುರಾಡಳಿತ ಮತ್ತು ಅಸಮರ್ಪಕ ನಿರ್ವಹಣೆಯಿಂದ ಭಾರತದ ಐಟಿ ಕಾರಿಡಾರ್ ನಲ್ಲಿ ಪ್ರವಾಹಸದೃಶ ಪರಿಸ್ಥಿತಿ ತಲೆದೋರಿದೆ. ಹೂಡಿಕೆದಾರರ ಸ್ವರ್ಗವಾಗಿದ್ದ ಬೆಂಗಳೂರು, ಜಾಗತಿಕ ಮಟ್ಟದ ತಂತ್ರಜ್ಞಾನದ ನೆಚ್ಚಿನ ನೆಲೆವೀಡಾಗಿದ್ದ ಬೆಂಗಳೂರು ಈಗ ಇನ್ನಿಲ್ಲದ ದುಸ್ಥಿತಿಗೆ ಸಿಲುಕಿ ಕಣ್ಣೀರು ಹಾಕುತ್ತಿದೆ. ಒಳಚರಂಡಿ ವ್ಯವಸ್ಥೆ ಹದಗೆಟ್ಟು ರಸ್ತೆಗಳು ನದಿಗಳಾಗಿವೆ. ಕಾಂಗ್ರೆಸ್ ಸರಕಾರದ ಘೋರ ವೈಫಲ್ಯದಿಂದ ಬೆಂಗಳೂರಿನ ಜನರು ಮಳೆಗೆ ಸಿಕ್ಕಿ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಹೆಚ್.ಡಿ.ಕೆ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಿಮ್ಮ ರಾಜ್ಯದ ಗೌರವವನ್ನು ನೀವೇ ಹಾಳು ಮಾಡುತ್ತಿದ್ದೀರಾ. ಪ್ರಕೃತಿಗೆ ಬುದ್ಧಿ ಹೇಳಲು ಸಾಧ್ಯವೇ? ಸರ್ಕಾರ ನಿಭಾಯಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಜಾಸ್ತಿ ಮಳೆ ಬಂದರೂ ನಿಭಾಯಿಸುವ ಶಕ್ತಿ ಸರ್ಕಾರ ಹಾಗೂ ಜನರಿಗಿದೆ. ಮಳೆ ಹೆಚ್ಚಾಗಿದೆ, ಚಂಡಮಾರುತ ಆಗಿದೆ. ಅದನ್ನು ನಿಭಾಯಿಸುತ್ತೇವೆ. ಅನಗತ್ಯವಾಗಿ ಹೇಳಿಕೆಗಳನ್ನು ಕೊಟ್ಟು ನಿಮ್ಮ ರಾಜ್ಯದ ಗೌರವವನ್ನು ನೀವೇ ಹಾಳು ಮಾಡುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.