ಬೆಂಗಳೂರು: ಬೆಂಗಳೂರಿನಲ್ಲಿ ಕಸ ವಿಲೇವಾರಿ ಟೆಂಡರ್ ನಲ್ಲಿ 15,000 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಕಿಡಿಕಾರಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಬರಿ ಹಿಟ್ ಆಂಡ್ ರನ್ ಮಾಡುವುದಲ್ಲ. ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಜೀವನ ಬರೀ ಹಿಟ್ ಅಂಡ್ ರನ್ ಮಾಡುವುದೇ ಆಗಿದೆ. ಅವರು ಬೀದಿಯಲ್ಲಿ ಹಿಟ್ ಅಂಡ್ ರನ್ ಮಾಡುವ ಬದಲು ಮಾಧ್ಯಮಗಳಲ್ಲಿ ಚರ್ಚೆಗೆ ಬರಲಿ, ಇಲ್ಲವೇ ಅವರ ಶಾಸಕರಿಂದ ಸದನದಲ್ಲಿ ಚರ್ಚೆ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ.
ಕುಮಾರಸ್ವಾಮಿ ಹತಾಶೆಯಲ್ಲಿದ್ದಾರೆ. ಅವರು ಬಹಿರಂಗ ಚರ್ಚೆಗೆ ಬರಲಿ. ಡಿ.ಕೆ. ಶಿವಕುಮಾರ್ ಅವರ ಹಾಗೆ ಹಿಟ್ ಅಂಡ್ ರನ್ ಮಾಡುವುದಿಲ್ಲ. ಕುಮಾರಸ್ವಾಮಿ ಅವರ ಸಹೋದರ ಹಾಗೂ ಅವರ ಪಕ್ಷದ ಸದಸ್ಯರಿಗೆ ದಾಖಲೆ ಕೊಟ್ಟು ಸದನದಲ್ಲಿ ಚರ್ಚೆ ಮಾಡಲಿ. ಕಿಂಗ್ ಆಫ್ ಕರಪ್ಶನ್ ಎಂದು ಜನ ನನ್ನನ್ನಾಗಲಿ, ನನ್ನ ಕುಟುಂಬದವರನ್ನಾಗಲಿ ಕರೆದಿಲ್ಲ. ಆ ರೀತಿ ಯಾರನ್ನು ಕರೆದಿದ್ದಾರೆ ಎಂದು ಚರ್ಚೆಗೆ ಬರಲಿ ತಿಳಿಸುತ್ತೇನೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಸರ್ಕಾರದ ಹಗರಣಗಳನ್ನು ಖಂಡಿಸಿ ಅಧಿವೇಶನದಲ್ಲಿ ಬಿಜೆಪಿಯವರು ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರು ಸದನದ ಹೊರಗೆ ಯಾಕೆ ಹೋರಾಟ ಮಾಡುತ್ತಿದ್ದಾರೆ? ಸದನದ ಒಳಗೆ ಹೋರಾಟ ಮಾಡಲಿ. ಅವರು ಏನು ಹೇಳಬೇಕೋ ಸದನದ ಒಳಗೆ ಹೇಳಲಿ. ನಾವು ಏನು ಉತ್ತರ ಕೊಡಬೇಕೋ ಕೊಡುತ್ತೇವೆ. ನಮಗೂ ಅವರ ಬಗ್ಗೆ ಗೊತ್ತಿದೆ. ಎಲ್ಲವನ್ನೂ ಒಂದೊಂದಾಗಿ ಬಿಚ್ಚಿಡುತ್ತೇವೆ. ಮುಡಾ ಹಗರಣ ಸೇರಿದಂತೆ ಹಲವಾರು ಹಗರಣಗಳು ನಡೆದಿರುವುದು ಬಿಜೆಪಿ ಕಾಲದಲ್ಲಿ. ಬಿಜೆಪಿ ಭ್ರಷ್ಟಾಚಾರದ ತಂದೆ. ಅವರ ಆಡಳಿತ ಅವಧಿಯಲ್ಲಿ ನಡೆದ ಭ್ರಷ್ಟಾಚಾರವನ್ನು ಶುದ್ಧೀಕರಣ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಹೇಳಿದರು.