ಬೆಂಗಳೂರು: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಯೋಜನೆ ನಿಲ್ಲಲಿದೆ ಎಂಬ ಮಾಜಿ ಪ್ರಧಾನಿ ಹೆಚ್.ಡಿದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿ ಷಡ್ಯಂತ್ರದ ಬಗ್ಗೆ ದೇವೇಗೌಡರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಗ್ಯಾರಂಟಿ ಯೋಜನೆ ನಿಲ್ಲಿಸಲು ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ. ಹೀಗಾಗಿ ಜನರು ಜಾಗೃತರಾಗಿರಬೇಕು ಎಂದು ದೇವೇಗೌಡರು ಸಂದೇಶ ನೀಡಿದ್ದಾರೆ ಎಂದರು.
ನಮ್ಮ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ವಿರೋಧ ಪಕ್ಷದವರ ಹಣೆಯಲ್ಲಿ ಬರೆದಿಲ್ಲ. ನಮ್ಮ ತಾಯಂದಿರ ಬದುಕು ಹಾಗೂ ಸಂಸಾರ ಉತ್ತಮವಾಗಿ ಸಾಗಲಿ ಎಂದು ನಾವು ಗೃಹಲಕ್ಷ್ಮಿ ಹಣ ನೀಡುತ್ತಿದ್ದೇವೆ. ಇದನ್ನು ತಪ್ಪಿಸಲು ಬಿಜೆಪಿ ಹಾಗೂ ಜೆಡಿಎಸ್ ಹೊರಟಿದೆ. ಜನ ಹುಷಾರಾಗಿರಬೇಕು ಎಂದು ತಿಳಿಸಿದರು.
ರಾಜ್ಯದ ಜನ ನಮ್ಮ ಗ್ಯಾರಂಟಿ ಯೋಜನೆಗಳು ಹಾಗೂ ಆಡಳಿತವನ್ನು ಒಪ್ಪಿದ್ದು, ಈ ಬಾರಿ ಉಪಚುನಾವನೇಯ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ಮೂರು ಕ್ಷೇತ್ರಗಲ್ಲಿ ಪ್ರಚಾರ ಮುಗಿಸಿದ್ದೇವೆ. ಬಿಜೆಪಿ ಏನೇ ತಂತ್ರ ಪ್ರಯೋಗಿಸಿದರೂ ಜನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದಂತೆ ಈ ಮೂರು ಕ್ಷೇತ್ರಗಳ ಚುನಾವಣೆಯಲ್ಲಿ ಮತ ಹಾಕಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.