ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರರೊಬ್ಬರು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕಮಿಷನ್ ಆರೋಪ ಮಾಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, ಬ್ಲ್ಯಾಕ್ ಮೇಲ್ ಗಳಿಗೆಲ್ಲ ನಾನು ಹೆದರಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸರಿಯಾಗಿ ಕೆಲಸ ಮಾಡಿದ ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗಲಿದೆ. ನಾವು ಕಾನೂನು ಪ್ರಕಾರವಾಗಿ ಕೆಲಸ ಮಾಡುತ್ತಿದ್ದು, ಇಂತಹ ಬ್ಲ್ಯಾಕ್ ಮೇಲ್ ಗಳಿಗೆಲ್ಲ ಈ ಡಿ.ಕೆ. ಶಿವಕುಮಾರ್ ಹೆದರುವುದಿಲ್ಲ ಎಂದು ಹೇಳಿದ್ದಾರೆ.
ನಾನು ಯಾವುದೇ ಗುತ್ತಿಗೆದಾರರಿಗೆ ಉತ್ತರ ಕೊಡಲು ಹೋಗುವುದಿಲ್ಲ. ನನಗೂ ಪ್ರಜ್ಞೆ ಇದೆ, ರಾಜಕೀಯ ಗೊತ್ತಿದೆ. ಅವರ ಹಿಂದೆ ಯಾರಿದ್ದಾರೆ, ಯಾರು ಇದನ್ನು ಹೇಳಿಸುತ್ತಿದ್ದಾರೆ ಎಂದೂ ಗೊತ್ತಿದೆ. ಅವರು ಏನು ಬೇಕಾದ್ರೂ ಮಾಡಿಕೊಳ್ಳಲಿ. ಈ ರೀತಿಯ ಬೆದರಿಕೆ, ಬ್ಲಾಕ್‌ಮೇಲ್ ಗೆ ನಾನು ಜಗ್ಗುವುದಿಲ್ಲ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
ಯಾರು ಇದನ್ನು ಮಾಡಿಸುತ್ತಿದ್ದಾರೆ ಎಂಬುದೂ ಗೊತ್ತು. ರಾಜ್ಯಪಾಲರಿಗೆ ಪತ್ರ ಕೊಡೋದು, ರಾಷ್ಟ್ರಪತಿಗೆ ಪತ್ರ ಕೊಡೋದು, ಪ್ರಧಾನಿಗಳನ್ನ ಭೇಟಿ ಆಗೋದು ಏನ್ ಬೇಕಾದರೂ ಮಾಡಿಕೊಳ್ಳಲಿ ಯಾವುದಕ್ಕೂ ಉತ್ತರ ಕೊಡುವುದಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.