ನವದೆಹಲಿ: ರಾಜ್ಯ ಇಂದು ಭೀಕರ ಬರಗಾಲದ ಸ್ಥಿತಿಯಲ್ಲಿದೆ. ಇಂತಹ ಸ್ಥಿತಯಲ್ಲಿಯೂ ಕೇಂದ್ರ ಸರ್ಕಾರ ಅನುದಾನ, ಹಣ ಬಿಡುಗಡೆ ಮಾಡದೇ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಜಂತರ್ ಮಂತರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಕೇಂದ್ರ ಸರ್ಕಾರ ರಾಜ್ಯಕ್ಕೆ ದೊಡ್ಡ ಅನ್ಯಾಯ ಮಾಡಿದೆ. ಈ ಅನ್ಯಾಯದ ವಿರುದ್ಧ ನಾವು ಧ್ವನಿ ಎತ್ತಲೇ ಬೇಕು. ನಾವು ಇಡೀ ರಾಜ್ಯದ ಜನತೆಯ ಪರವಾಗಿ ಇಂದು ಹೋರಾಟ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.
ನಾವು ನಿರ್ಮಾಪಕರೂ ಅಲ್ಲ, ವಿತರಕರೂ ಅಲ್ಲ, ನಾಟಕ ಮಾಡಲೂ ಇಲ್ಲಿಗೆ ಬಂದಿಲ್ಲ. ಬಿಜೆಪಿಯವರು ಜನರ ಭಾವನೆಗಳ ಮೇಲೆ ದೇಶ ಕೊಂಡೊಯ್ಯುತ್ತಿದ್ದಾರೆ. ನಾವು ಜನರ ಬದುಕಿನ ಮೇಲೆ ಕೊಂಡೊಯ್ಯುತ್ತಿದ್ದೇವೆ. ನಮಗೆ ಕೇಂದ್ರದಿಂದ ಬರಬೇಕಾದ ಹಣವನ್ನು ಕೊಡಲಿ, ತೆರಿಗೆ ಹಣ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
ಕೇಂದ್ರದ ಹಣವನ್ನು ನಾವು ನಮ್ಮ ಸ್ವಂತಕ್ಕೆ ಕೇಳುತ್ತಿಲ್ಲ ರಾಜ್ಯದ ಜನರಿಗೆ, ನಮಗೆ ವೋಟ್ ಕೊಟ್ಟು ಆಯ್ಕೆ ಮಾಡಿದ ಜನರಿಗಾಗಿ ನ್ಯಾಯ ಕೇಳುತ್ತಿದ್ದೇವೆ. ನಾವಿಲ್ಲಿ ಕೇಂದ್ರದ ಅನ್ಯಾಯ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಬಿಜೆಪಿ ನಾಯಕರು ಬೆಂಗಳೂರಿನ ಗಾಂಧಿ ಪ್ರತಿಮೆ ಬಳಿ ಧರಣಿ ಮಾಡುತ್ತಿದ್ದಾರೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಬಿಜೆಪಿ ಸಂಸದರಿಗೆ, ನಾಯಕರಿಗೆ ಧ್ವನಿ ಎತ್ತಲಾಗಿಲ್ಲ. ಅನುದಾನ ಬಿಡುಗಡೆ ಮಾಡಿಸಿ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ. ಈಗ ನಮ್ಮ ಹೋರಾಟದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಅವರಿಗೆ ಮಾನ ಮರ್ಯಾದೆ ಕಿಂಚಿತ್ತೂ ಇಲ್ಲ. ರಾಜ್ಯದ ಜನರ ಬಗ್ಗೆ ಕಾಳಜಿಯೂ ಇಲ್ಲ. ಶ್ವೇತ ಪತ್ರ ಹೊರಡಿಸಲಿ ಎಂದಿದ್ದಾರೆ. ಕೇಂದ್ರ ಸರ್ಕಾರ ಅನುದಾನದ ಹಣ ಬಿಡುಗಡೆ ಮಾಡಲಿ. ಅಧಿವೇಶನದಲ್ಲಿ ಶ್ವತ ಪತ್ರ ನೀಡುತ್ತೇವೆ ಎಂದು ಗುಡುಗಿದರು.