ಬೆಳಗಾವಿ: ರಾಜಕೀಯ ಒತ್ತಡದಿಂದಾಗಿ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಯೂಟರ್ನ್ ಹೊಡೆದಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಅನ್ವರ್ ಮಾಣಿಪ್ಪಾಡಿ ಅವರು ತಮ್ಮ ಹೇಳಿಕೆ ಬದಲಿಸಿದ್ದಾರೆ. ಅವರ ಹೇಳಿಕೆ ವಿಡಿಯೋಗಳನ್ನು ನಾನು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವರನ್ನು ಗಮನಿಸಿದ್ದೇನೆ. ಅನೇಕ ವಿಚಾರಗಳು ಅವರ ಬಾಯಲ್ಲೇ ಬಂದಿವೆ. ತಮ್ಮ ವಿಚಾರವನ್ನು ಪ್ರಧಾನಮಂತ್ರಿ ಹಾಗೂ ಗೃಹಮಂತ್ರಿಗಳಿಗೆ ಪತ್ರ ಬರೆದು ತಿಳಿಸಿರುವುದಾಗಿ ಹೇಳಿದ್ದರು. ಅವರು ಹೇಳಿರುವ ವಿಚಾರಗಳನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದ್ದಾರೆ. ಈ ದಾಖಲೆಗಳು ಎಲ್ಲೂ ಹೋಗಲು ಸಾಧ್ಯವಿಲ್ಲ. ನಾವು ದಾಖಲೆ ಬಿಡುಗಡೆ ಮಾಡುವ ಮುನ್ನ ಅವರೇ ಈ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ತಿಳಿಸಿದರು.
ಈ ಪ್ರಕರಣದ ಎಲ್ಲಾ ವಿಚಾರ ನಮ್ಮ ಕಣ್ಮುಂದೆ ಇದೆ. ಸಿಬಿಐನವರು ಈ ಪ್ರಕರಣದ ತನಿಖೆ ಮಾಡುವುದಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಿ. ನಂತರ ನಾವು ಆಲೋಚನೆ ಮಾಡುತ್ತೇವೆ. ನಾವಾಗಿ ಸಿಬಿಐ ತನಿಖೆಗೆ ನೀಡುವುದಿಲ್ಲ ಎಂದು ಬಿಜೆಪಿ ಅವರಿಗೆ ಗೊತ್ತಿದೆ ಹೀಗಾಗಿ ಅವರು ಸಿಬಿಐ ತನಿಖೆಗೆ ಕೇಳುತ್ತಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರು ನನಗೆ ಆಫರ್ ಕೊಟ್ಟಿದ್ದಾರೆ ಎಂಬ ಅನ್ವರ್ ಹೇಳಿಕೆಗೆ ಈ ವಿಚಾರವನ್ನು ಮೊದಲೇ ಹೇಳಬೇಕಿತ್ತು. ಯಾರೆಲ್ಲಾ ಆಫರ್ ಕೊಟ್ಟಿದ್ದರು ಎಂದು ಆಗ ಹೇಳದೆ, ಈಗ ಹೇಳಿದರೆ ಏನು ಪ್ರಯೋಜನ? ಅಧಿಕಾರ ಇದ್ದಾಗ ಏನು ಹೇಳುತ್ತೇವೆ ಎಂಬುದು ಮುಖ್ಯ ಎಂದು ತಿಳಿಸಿದರು.