ಏಪ್ರಿಲ್ 6 ರಂದು ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕ್ಷೇತ್ರಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಸೂಳಗಿರಿಯಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ಕೈಗೊಂಡಿದ್ದು, ಪ್ರಚಾರದ ವೇಳೆಯಲ್ಲಿ ಡಿ.ಕೆ. ಶಿವಕುಮಾರ್ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಪದೇಪದೇ ಮೊಬೈಲ್ ನೋಡುತ್ತಿದ್ದ ಅವರು ಕಾರ್ಯಕ್ರಮದಿಂದ ಅರ್ಧಕ್ಕೆ ಹೊರಟಿದ್ದಾರೆ.
ಕಾರ್ಯಕ್ರಮದ ವೇದಿಕೆಯಿಂದ ಕೆಳಗಿಳಿದು ಡಿಕೆಶಿ ಬಹುದೂರದವರೆಗೆ ನಡೆದುಕೊಂಡು ಹೋಗಿದ್ದು, ಫೋನ್ ನಲ್ಲಿ ಮಾತನಾಡುತ್ತಾ ವಾಹನ ಏರಿ ಪ್ರಚಾರದ ಸಭೆಯಿಂದ ಬೆಂಗಳೂರು ಕಡೆಗೆ ತೆರಳಿದ್ದಾರೆನ್ನಲಾಗಿದೆ.
ಅಂದಹಾಗೇ ಡಿ.ಕೆ. ಶಿವಕುಮಾರ್ ಫುಲ್ ಟೆನ್ಷನ್ ನಲ್ಲಿದ್ದಾರೆ. ಸಿಡಿ ಯುವತಿ ಪೋಷಕರು ತಮ್ಮ ಮಗಳನ್ನು ಡಿಕೆಶಿ ಒತ್ತೆಯಾಳಾಗಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ರಮೇಶ್ ಜಾರಕಿಹೊಳಿ ಕೂಡ ಡಿಕೆಶಿ ಬಗ್ಗೆ ಗಂಭೀರ ಆರೋಪ ಮಾಡಿ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಡಿಕೆಶಿ ಪ್ರತಿ ಕ್ಷಣದ ಬೆಳವಣಿಗೆಗಳನ್ನು ಮೊಬೈಲ್ ಮೂಲಕ ಪಡೆದುಕೊಂಡಿದ್ದು, ಟೆನ್ಷನ್ ನಲ್ಲಿದ್ದಂತೆ ಕಂಡು ಬಂದಿದ್ದಾರೆ.
ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಯಾರೋ ಮಾತನಾಡಿದ್ದಕ್ಕೆಲ್ಲ ನಾನು ಉತ್ತರ ಕೊಡಲು ಆಗುವುದಿಲ್ಲ. ಅವರಿಗೆ ಏನೋ ಸಮಸ್ಯೆ, ಒತ್ತಡ ಇರಬೇಕು. ಹಾಗಾಗಿ ಅವರು ಮಾತನಾಡಿದ್ದಾರೆ. ಅದಕ್ಕೆಲ್ಲ ನಾನು ತಲೆಕೆಡಿಸಿಕೊಂಡು ಉತ್ತರ ಕೊಡಲು ಆಗಲ್ಲ ಎಂದು ಹೇಳಿದ್ದ ಡಿಕೆಶಿ ಒತ್ತಡದಲ್ಲಿದ್ದಂತೆ ಕಂಡು ಬಂದಿದ್ದು, ಪ್ರಚಾರದ ಸಭೆಯಿಂದ ನಿರ್ಗಮಿಸಿದ್ದಾರೆ.