ಯಾರೋ ಮಾತನಾಡಿದ್ದಕ್ಕೆಲ್ಲ ನಾನು ಉತ್ತರ ಕೊಡಲು ಆಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸಿಡಿ ಪ್ರಕರಣದಲ್ಲಿ ಮಹಾನಾಯಕ ಡಿ.ಕೆ. ಶಿವಕುಮಾರ್ ವಿರುದ್ಧ ನೇರ ಹೋರಾಟ ನಡೆಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ರಮೇಶ್ ದಿನಕ್ಕೊಂದು ಹೇಳಿಕೆ ಕೊಡ್ತಾರೆ. ಅವರಿಗೆ ಉತ್ತರ ಕೊಡಬೇಕಿಲ್ಲ. ಪರ್ಸನಲ್ ಪ್ರಾಬ್ಲಂ ಅವರೇ ಸರಿಮಾಡಿಕೊಳ್ಳುತ್ತಾರೆ ಎಂದಿದ್ದಾರೆ.
ನಮ್ಮ ಮಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಯುವತಿ ಪೋಷಕರು ಆರೋಪಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿ, ನನಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ತಮ್ಮ ಬಗ್ಗೆ ಆರೋಪ ಮಾಡಿದ್ದಾರೆ. ಅವರು ಒತ್ತಡದಲ್ಲಿದ್ದಾರೆ. ಅವರಿಗೆ ಏನೋ ಸಮಸ್ಯೆ, ಒತ್ತಡ ಇರಬೇಕು. ಹಾಗಾಗಿ ಅವರು ಮಾತನಾಡಿದ್ದಾರೆ. ಅದಕ್ಕೆಲ್ಲ ನಾನು ತಲೆಕೆಡಿಸಿಕೊಂಡು ಉತ್ತರ ಕೊಡಲು ಆಗಲ್ಲ ಎಂದಿದ್ದಾರೆ.
ಅಧಿಕಾರಿಗಳು ತನಿಖೆ ಮಾಡುತ್ತಾರೆ. ನನಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಅವರ ಪರ್ಸನಲ್ ಪ್ರಾಬ್ಲಮ್ ಅನ್ನು ಅವರೇ ಸರಿ ಮಾಡಿಕೊಳ್ಳಬೇಕು. ರಮೇಶ್ ಜಾರಕಿಹೊಳಿ ನಿನ್ನೆ ಒಂದು ಹೇಳಿಕೆ ನೀಡುತ್ತಾರೆ. ಇವತ್ತೊಂದು, ನಾಳೆ ಒಂದು ಹೇಳಿಕೆ ನೀಡ್ತಾರೆ. ಅವರಿಗೆಲ್ಲ ಉತ್ತರ ಕೊಡುವ ಅವಶ್ಯಕತೆ ನನಗಿಲ್ಲ. ಕಾನೂನು ಇದೇ. ಅವರ ಸರ್ಕಾರವಿದೆ. ಏನು ಬೇಕಾದರೂ ತನಿಖೆ ಮಾಡಿಕೊಳ್ಳಲಿ. ನನಗೆ ಈ ರೀತಿ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ಇದೆಲ್ಲ ನನಗೆ ಗೊತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.