
ರಾಮನಗರ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಶಾಸಕರು, ಸಚಿವರು ಕೂಡ ಸಿಎಂ ಆಗಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅನುಮತಿ ಕೊಟ್ರೆ ನಾನು ಸಿಎಂ ಆಗ್ತೀನಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಹಿರಿಯ ಶಾಸಕ ಅರ್.ವಿ.ದೇಶಪಾಂಡೆ ಮತ್ತೆ ಸಿಎಂ ಬದಲಾವಣೆ ಚರ್ಚೆ ಶುರುಮಾಡಿದ್ದಾರೆ.
ಶಾಸಕ ಆರ್.ವಿ. ದೇಶಪಾಂಡೆ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಬಹಳ ಸಂತೋಷ, ಆಗಲಿ… ಅವರು ಸೀನಿಯರ್, ಆದರೆ ತಪ್ಪೇನು? ಎಂದು ಪರೋಕ್ಷ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶಾಸಕ ಆರ್.ವಿ.ದೇಶಪಾಂಡೆ, ಸಚಿವನಾಗುವ ಆಸೆಯಿಲ್ಲ, ಸಚಿವನಾಗಿ ದಣಿದಿದ್ದೇನೆ, ಸಿಎಂ ಆಗಬೇಕಷ್ಟೇ. ಸಿದ್ದರಾಮಯ್ಯನವರು ಅನುಮತಿ ಕೊಟ್ರೆ ಸಿಎಂ ಆಗ್ತೀನಿ ಎಂದು ಹೇಳಿದ್ದರು.
ಹಾಗಂತ ಸಿಎಂ ಬದಲಾವಣೆಯ ಪ್ರಶ್ನೆ ಇಲ್ಲ. ಅಂತಹ ಚರ್ಚೆಯೂ ನಡೆಯುತ್ತಿಲ್ಲ. ಜೀವನದಲ್ಲಿ ಮಹತ್ವಾಕಾಂಕ್ಷೆ ಇರಬೇಕು. ಸಿದ್ದರಾಮಯ್ಯ ಅವರಿಗಿಂತ ವಯಸ್ಸಿನಲ್ಲಿ ನಾನು ದೊಡ್ಡವನು. ರಾಜಕೀಯವಾಗಿಯೂ ಸಾಕಷ್ಟು ಅನುಭವವಿದೆ. ಹೈಕಮಾಂಡ್ ಹುದ್ದೆಕೊಟ್ಟರೂ ಸಿದ್ದರಾಮಯ್ಯ ಅನುಮತಿ ಕೊಡ್ಬೇಕು. ಅವರು ಅನುಮತಿ ಕೊಟ್ರೇ ಸಿಎಂ ಆಗ್ತೀನಿ ಎಂದಿದ್ದರು.