
ಬೆಂಗಳೂರು: ಇನ್ಮುಂದೆ ಮನೆ ಬಾಗಿಲಿಗೆ ತೆರಳಿ ಉಚಿತವಾಗಿ ಖಾತೆ ವಿತರಣೆ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.
2025- 26 ನೇ ಸಾಲಿನ ಬಿಬಿಎಂಪಿ ಬಜೆಟ್ ಕುರಿತು ಬೆಂಗಳೂರು ನಗರದ ಶಾಸಕರ ಜತೆ ಸಭೆ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್,, ಬೀದಿಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿ ವಿತರಣೆ, ಅಕ್ರಮ ನಿರ್ಮಾಣಗಳ ಪತ್ತೆಗೆ ‘ಎಐʼ ತಂತ್ರಜ್ಞಾನದ ಬಳಕೆ ಸೇರಿದಂತೆ ಹಲವು ವ್ಯವಸ್ಥೆಗಳು ಶೀಘ್ರ ಜಾರಿಗೆ ಬರಲಿದೆ ಎಂದರು.
ನಗರದ ಸುಮಾರು 7 ಲಕ್ಷ ಮನೆಗಳು ತೆರಿಗೆ ಕಟ್ಟಿರಲಿಲ್ಲ, ಇವುಗಳಲ್ಲಿ 1 ಲಕ್ಷ ಮನೆಗಳು ತೆರಿಗೆ ವ್ಯಾಪ್ತಿಗೆ ಬಂದಿದ್ದು, ಇನ್ನೂ 6 ಲಕ್ಷ ಮನೆಗಳನ್ನು ತೆರಿಗೆ ವ್ಯಾಪ್ತಿಗೆ ತರಬೇಕಿದೆ. ಆದ ಕಾರಣ ಒಂದು ಬಾರಿ ಪಾವತಿಗೆ ಅವಕಾಶ (ಓಟಿಎಸ್) ಮಾಡಿಕೊಡಲಾಯಿತು. ಅಕ್ರಮ ನಿರ್ಮಾಣಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಪಾಲಿಕೆಗೆ ಇರಲಿಲ್ಲ. ಕಳೆದ ವಾರ ಸದನದಲ್ಲಿ ಈ ಬಗ್ಗೆ ವಿಧೇಯಕ ಅಂಗೀಕಾರ ವಾಗಿದೆ. ಜೊತೆಗೆ ಕಂದಾಯ ಬಡಾವಣೆಗಳಲ್ಲಿ ಇರುವ ಖಾಸಗಿ ರಸ್ತೆಗಳನ್ನೂ ಸಹ ಸರ್ಕಾರಿ ರಸ್ತೆಗಳು ಎಂದು ಘೋಷಣೆ ಮಾಡಲಾಗುವುದು ಎಂದರು.
ಬೆಂಗಳೂರು ನಗರದಲ್ಲಿ ಉತ್ತಮ ತೆರಿಗೆ ಸಂಗ್ರಹವಾಗಬೇಕು. ನೀರು, ರಸ್ತೆ ಸೇರಿದಂತೆ ಅನೇಕ ಮೂಲಸೌಕರ್ಯಗಳನ್ನು ನೀಡಿದ್ದೇವೆ. ಆದರೆ ಅನೇಕರು ಇದಕ್ಕೆ ತಕ್ಕಂತೆ ತೆರಿಗೆ ಪಾವತಿ ಮಾಡುತ್ತಿಲ್ಲ. ಅನುಮತಿ ನೀಡಿದ್ದಕ್ಕಿಂತ ಹೆಚ್ಚು ವಿಸ್ತೀರ್ಣದ ಹಾಗೂ ಮಹಡಿಗಳನ್ನು ಅಕ್ರಮವಾಗಿ ಕಟ್ಟಿಕೊಂಡಿದ್ದಾರೆ. ಇಂತಹ ಅಕ್ರಮಗಳನ್ನು ‘ಎಐʼ ತಂತ್ರಜ್ಞಾನದ ಮೂಲಕ ಪತ್ತೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದರು.
ಮನೆ ಬಾಗಿಲಿಗೆ ತೆರಳಿ ಉಚಿತವಾಗಿ ಖಾತೆ ನೀಡುವ ವಿನೂತನ ವ್ಯವಸ್ಥೆಯನ್ನು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜಾರಿಗೆ ತರಲಾಗಿದೆ. ಈ ಕಾರ್ಯಕ್ರಮಕ್ಕೆ ಏಪ್ರಿಲ್ ತಿಂಗಳಿನಿಂದ ಚಾಲನೆ ದೊರೆಯಲಿದೆ. ಪ್ರತಿಯೊಂದು ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಅಕಸ್ಮಾತ್ ತಪ್ಪಿಹೋಗಿದ್ದಲ್ಲಿ ಅಂತವರು ತಮ್ಮ ದಾಖಲೆಗಳನ್ನು ಮತ್ತೆ ನೀಡಬಹುದು. ಬೆಂಗಳೂರು ನಗರದ ಪ್ರತಿ ಕ್ಷೇತ್ರದ ಶಾಸಕರ ಬಳಿ ಮಾತನಾಡಿ, ಕ್ಷೇತ್ರವಾರು ಕಾರ್ಯಕ್ರಮ ನಡೆಸಿ ಈ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.