ಬೆಳಗಾವಿ: ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವಂತೆ ಮಹಿಳಾ ಸಂಘಟನೆಗಳಿಗೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಜನರ ಬದುಕು ಬದಲಾಗಲಿ ಎಂದು ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಆದರೆ ನೀನು ಹೆಣ್ಣು ಮಕ್ಕಳು ದಾರಿ ತಪ್ಪುತ್ತಾರೆ ಎಂದ್ರೆ ಏನರ್ಥ? ಮಿಸ್ಟರ್ ಕುಮಾರಸ್ವಾಮಿ ನೀನು ಚುನಾವಣೆಯಲ್ಲಿ ಗೆದ್ದು ಎಂಪಿ ಆಗಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಅವರ ವಿಷಾದ, ಸಾರಿ ಇದ್ಯಾವುದೂ ನಮಗೆ ಬೇಕಿಲ್ಲ. ಕಪಾಳಕ್ಕೆ ಹೊಡೆದು ಬಳಿಕ ಸಾರಿ ಕೇಳಿದರೆ ಏನು ಪ್ರಯೋಜನ? ಹಾಗಾಗಿ ಜನರೇ ತಕ್ಕ ಪಾಠ ಕಲಿಸಬೇಕು. ರಾಜ್ಯದ ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿಯೂ ಮಹಿಳೆಯರು ಪ್ರತಿಭಟನೆ ನಡೆಸಬೇಕು. ಒಂದು ಪಕ್ಷದ ಅಧ್ಯಕ್ಷನಾಗಿ ನಾನು ಕರೆ ಕೊಡುತ್ತಿದ್ದೇನೆ. ನಿಮ್ಮ ಸ್ವಾಭಿಮಾನ ಉಳಿಸಿಕೊಳ್ಳಲು ಪ್ರತಿಭಟನೆ ಮಾಡಿ. ಪ್ರತಿ ತಾಲೂಕು ಮಟ್ಟದಲ್ಲಿಯೂ ಹೋರಾಟ ಮಾಡಬೇಕು ಎಂದು ಮಹಿಳಾ ಸಂಘಟನೆಗಳಿಗೆ ಕರೆ ನೀಡಿದ್ದಾರೆ.