ಬೆಂಗಳೂರು: ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸಿದೆ. ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಅತಿ ಹೆಚ್ಚು ತೆರಿಗೆ ಪಾವತಿಸುವ ನಮಗೇ ಅನ್ಯಾಯ ಮಾಡಲಾಗುತ್ತಿದೆ. ನಮ್ಮ ತೆರಿಗೆ ಹಣ ಉತ್ತರ ಪ್ರದೇಶ, ಬಿಹಾರ, ದೆಹಲಿಗೆ ಕೊಡುತ್ತಿದ್ದಾರೆ. ಆಂಧ್ರಪ್ರದೇಶಕ್ಕಿಂತಲೂ ಕಡಿಮೆ ಹಣವನ್ನು ನಮಗೆ ನೀಡಿದ್ದಾರೆ. ನಾವು ಅವರಿಗಿಂತ ಕೀಳಾಗಿದ್ದೇವಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಕೇಂದ್ರದಲ್ಲಿ ಐವರು ಸಚಿವರು ನಮ್ಮವರೇ ಇದ್ದಾರೆ. ನಮ್ಮಲ್ಲೇ ಇದ್ದುಕೊಂಡು ಈಗ ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಕೇಂದ್ರ ಸರ್ಕಾರದ ತೆರಿಗೆ ತಾರತಮ್ಯ ಖಂಡಿಸಿ ‘ನಮ್ಮ ತೆರಿಗೆ ನಮ್ಮ ಹಕ್ಕು’ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.