ಮೈಸೂರು: ಮೈಸೂರು ದಸರಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ವಿದ್ಯುತ್ ದೀಪಾಲಂಕಾರವನ್ನು 10-12 ದಿನಗಳವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮೈಸೂರು ದಸರಾ ಮಹೋತ್ಸವ, ಜಂಬೂಸವಾರಿ ಹಿನ್ನೆಲೆಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ನಾನು ಇಂಧನ ಸಚಿವನಾಗಿದ್ದಾಗ ಮಾಡಿದ್ದಕ್ಕಿಂತ ಈ ಬಾರಿ ಅತ್ಯುತ್ತಮವಾಗಿ ದೀಪಾಲಂಕಾರ ಮಾಡಲಾಗಿದೆ. ಅಲ್ಲದೆ ಒಂದೂವರೆ ಸಾವಿರ ಡ್ರೋನ್ ಗಳ ಶೋ ವ್ಯವಸ್ಥೆ ಮಾಡಲಾಗಿದೆ. ಸಾಂಸ್ಕೃತಿಕ ನಾಡಿನಲ್ಲಿ ನಮ್ಮ ಜನ ನಮ್ಮ ಸಂಸ್ಕೃತಿಯನ್ನು ಕಣ್ತುಂಬಿಕೊಂಡು ಆನಂದಿಸಲಿ ಎಂದು ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಳೆದ ಹತ್ತು ದಿನಗಳಲ್ಲಿ ಇಳಯರಾಜ, ಎ.ಆರ್ ರೆಹಮಾನ್ ಅವರ ಕಾರ್ಯಕ್ರಮಗಳಿಗೆ ಎರಡೂವರೆ ಲಕ್ಷ ಜನ ಸೇರಿದ್ದರು. ದಸರಾದ ಈ ಶುಭ ಸಂದರ್ಭದಲ್ಲಿ ನಾಡಿನ ಜನ ನೆಮ್ಮದಿ, ಶಾಂತಿಯಿಂದ ಬದುಕಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಎಲ್ಲರೂ ಸೇರಿ ದಸರಾ ಆಚರಣೆ ಮಾಡೋಣ. ಮೈಸೂರಿನಲ್ಲಿ ದೀಪಾಲಂಕಾರ ಇನ್ನೂ 10-12 ದಿನಗಳವರೆಗೆ ಇರಲಿದೆ ಎಂದರು.
ಇದೇ ವೇಳೆ ನಾಡಿನ ವಿವಿಧ ಭಾಗಗಳಲ್ಲೂ ದಸರಾ ಕಾರ್ಯಕ್ರಮವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಮಡಿಕೇರಿಯಲ್ಲಿ ಮೈಸೂರಿಗಿಂತಲೂ ಹೆಚ್ಚಿನ ಹಣ ವ್ಯಯ ಮಾಡಿ ಸ್ತಬ್ಧಚಿತ್ರಗಳನ್ನು ಮಾಡಿದ್ದಾರೆ. ಇದನ್ನು ನೋಡಿ ನನಗೆ ಅಚ್ಚರಿಯಾಯಿತು ಎಂದು ತಿಳಿಸಿದರು.