ಬೆಂಗಳೂರು: ಒಂದು ವಾರದೊಳಗೆ ವಿದ್ಯುತ್ ದರ ಏರಿಕೆಯ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ, ಹೋರಾಟ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವಿದ್ಯುತ್ ದರ ಏರಿಕೆ ಮಾಡಿದ ಆದೇಶವನ್ನು ಸರ್ಕಾರ ಒಂದು ವಾರದೊಳಗೆ ವಾಪಸ್ ಪಡೆಯದಿದ್ದರೆ ಅನಿವಾರ್ಯವಾಗಿ ಹೋರಾಟ ನಡೆಸಲಾಗುತ್ತದೆ. ನವೆಂಬರ್ 23 ರಿಂದ 28 ರವರೆಗೆ ತಾಲೂಕು ಕೇಂದ್ರಗಳಲ್ಲಿ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಇಂತಹ ಸಂದರ್ಭದಲ್ಲಿ ವಿದ್ಯುತ್ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ ಎಂದು ಹೇಳಿದ ಅವರು, ಆರ್ಥಿಕ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರ ಪ್ರತಿ ಯೂನಿಟ್ ಗೆ 40 ಪೈಸೆಯಷ್ಟು ಹೆಚ್ಚಳ ಮಾಡಿರುವುದು ಜನ ವಿರೋಧಿ ನೀತಿಯಾಗಿದೆ. ವಿದ್ಯುತ್ ದರ ಏರಿಕೆ ಮಾಡುವ ಮೂಲಕ ವ್ಯಾಪಾರ, ಕೈಗಾರಿಕೆ, ಕೃಷಿ ಕ್ಷೇತ್ರಕ್ಕೆ ಬರೆ ಎಳೆದಿದೆ. ಇನ್ನು ಒಂದೂವರೆ ವರ್ಷ ವಿದ್ಯುತ್ ದರ ಏರಿಕೆ ತೀರ್ಮಾನವನ್ನು ಸರ್ಕಾರ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.