ಬೆಂಗಳೂರು: ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ನಮ್ಮ ಮುಖಂಡರ ಮೇಲೆ ಸುಳ್ಳು ಕೇಸು ಹಾಕುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಶಾಂತಿ ಭಂಗವನ್ನುಂಟು ಮಾಡುವಂತೆ ಮಾತನಾಡಿದರೂ ಕೇಸ್ ಹಾಕುತ್ತಿಲ್ಲ. ಕೊರೋನಾ ಸಮಯದಲ್ಲಿ ಪದಾರ್ಥ ಲೂಟಿ ಮಾಡಿದ್ದರು. ಅವರ ಮೇಲೆ ದೂರು ಕೊಟ್ಟರೂ ಕೇಸ್ ಹಾಕಲಿಲ್ಲ. ನಮ್ಮ ಕಾರ್ಯಕರ್ತರ ಮೇಲೆ ಈಗ ಕೇಸ್ ಹಾಕಿದ್ದಾರೆ ಎಂದು ದೂರಿದ್ದಾರೆ.
ನಮ್ಮ ಶಾಸಕ ಸಂಗಮೇಶ್ ಮೇಲೆ ಈಗ ಸುಳ್ಳು ಕೇಸ್ ಹಾಕಲಾಗಿದೆ. ಸಂಗಮೇಶ್ ಬಿಜೆಪಿಗೆ ಬರಲಿಲ್ಲವೆಂದು ಕೇಸ್ ಹಾಕಿಸಿದ್ದಾರೆ. ಈ ಹಿಂದೆಯೂ ಅವರಿಗೆ ಬಿಜೆಪಿಗೆ ಬರುವಂತೆ ಒತ್ತಡ ಹಾಕಿದ್ದರು. ಅವರು ಆಗ ಹೋಗಲಿಲ್ಲ. ಈಗ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸದನದಲ್ಲಿ ಗಾಯ ತೋರಿಸಲು ಶರ್ಟ್ ಬಿಚ್ಚಿದ್ದು ಇದಕ್ಕೆ ಅಸಭ್ಯವರ್ತನೆ ಎಂದು ಸಸ್ಪೆಂಡ್ ಮಾಡಿದ್ದಾರೆ. ಸ್ಪೀಕರ್ ಕೂಡ ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಾರ್ಚ್ 13 ರಂದು ನಾವು ಶಿವಮೊಗ್ಗ ಚಲೋ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.