ಬೆಂಗಳೂರು: ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಆಮಿಷವೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಕೊಂಚ ರಿಲೀಫ್ ಸಿಕ್ಕಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಮತದಾರರಿಗೆ ಆಮಿಷವೊಡ್ಡಿದ ಆರೋಪದಲ್ಲಿ ತಮ್ಮ ವಿರುದ್ಧ ಆರ್ ಎಂ ಸಿ ಯಾರ್ಡ್ ನಲ್ಲಿ ದಾಖಲಾಗಿದ್ದ ಎಫ್ ಐ ಆರ್ ಪ್ರಶ್ನಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಹೈಕೋರ್ಟ್ ಅರ್ಜಿ ವಿಚಾರಣೆ ನಡೆಸಿತ್ತು. ಈ ವೇಳೆ ಡಿ.ಕೆ.ಶಿವಕುಮಾರ್ ಪರ ವಕೀಲ ಉದಯ್ ಹೊಳ್ಳ, ಚುನಾವಣೆ ಭಾಷಣವನ್ನು ಆಮಿಷವೆಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ ಎಂದು ವಾದ ಮಂಡಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚುನಾವಣಾ ಆಯೋಗ ಪರ ವಕೀಲರು, ಡಿ.ಕೆ.ಶಿವಕುಮಾರ್ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಆಮಿಷವೊಡ್ಡಿದ್ದಾರೆ. ನಾನು ಇಲ್ಲಿ ಬಿಸಿನೆಸ್ ಡೀಲ್ ಗೆ ಬಂದಿದ್ದೇನೆ. ನಿಮಗೆ ಹೆಚ್ಚು ಕಾವೇರಿ ನೀರು ಜೊತೆಗೆ ಅಪಾರ್ಟ್ ಮೆಂಟ್ ಪಕ್ಕದಲ್ಲಿ ಸಿಎ ಸೈಟ್ ಬೇಕೆಂದು ಬೇಡಿಕೆ ಇಟ್ಟಂತೆ ಮತ ಹಾಕಿದ 2-3 ತಿಂಗಳಲ್ಲಿ ನಿಮ್ಮ ಬೇಡಿಕೆ ಈಡೇರಿಸುತ್ತೇನೆ ಎಂದು ಆಮಿಷವೊಡ್ಡಿದ್ದಾರೆ ಎಂದರು.
ಇದನ್ನು ಆಲಿಸಿದ ನ್ಯಾಯಾಲಯ ಚುನಾವಣೆ ವೇಳೆ ಇಂತಹ ಭಾಷಣ ಪುನರಾವರ್ತನೆ ಆಗದಂತೆ ಎಚ್ಚರಿಕೆ ನೀಡಿ. ಮುಂದಿನ ವಿಚಾರಣೆವರೆಗೆ ಡಿ.ಕೆ.ಶಿವಕುಮಾರ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚಿಸಿದೆ.