ಮೈಸೂರು: ‘ಅನುಭವಿ ರಾಜಕಾರಣಿ ಡಿ.ಕೆ. ಶಿವಕುಮಾರ್ ಸಿಡಿ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಲಾಗ್ತಿದೆ ಎಂದು ಏಕೆ ಹೇಳಿದ್ದಾರೋ ಗೊತ್ತಿಲ್ಲ.’
ಹೀಗೆಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ನನಗಿಂತ ಪ್ರಬುದ್ಧ ರಾಜಕಾರಣಿ. ದುಡುಕಿ ಯಾಕೆ ಈ ರೀತಿ ಅವರು ತಮ್ಮ ಹೆಸರನ್ನು ಹೇಳಿಕೊಂಡಿದ್ದಾರೆಯೋ ಗೊತ್ತಿಲ್ಲ. ರಾಜ್ಯದಲ್ಲಿ ಮಹಾನ್ ನಾಯಕರು ಬಹಳ ಜನ ಇದ್ದಾರೆ. ಇವರೇ ಮಹಾನಾಯಕ ಎಂದು ಏಕೆ ಅಂದುಕೊಂಡಿದ್ದಾರೆ. ಬಿಜೆಪಿ ಒಳಗೊಬ್ಬ ಮಹಾನಾಯಕರು ಬೆಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಡಿಕೆಶಿ ಪ್ರಬುದ್ಧ ರಾಜಕಾರಣಿ, ಅವರು ದುಡುಕಿ ಹೇಳಿರಬಹುದು. ತಮ್ಮ ಹೆಸರನ್ನು ಏಕೆ ಸಿಲುಕಿಸಿಕೊಂಡರು ಎನ್ನುವುದು ನನಗೆ ತಿಳಿದಿಲ್ಲ. ಈ ಪ್ರಕರಣವನ್ನು ಎಲ್ಲರೂ ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದಾರೆ. ಯಾರಿಗೂ ಸೀರಿಯಸ್ನೆಸ್ ಇಲ್ಲ ಎಂದು ಹೆಚ್.ಡಿ.ಕೆ. ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಡಿ ವಿಚಾರದಲ್ಲಿ ಯಾರನ್ನು ಸಂತ್ರಸ್ತರು ಎಂದು ಕರೆಯುವುದು? ಇಲ್ಲಿ ಹೆಣ್ಣುಮಗಳಿಗೆ ನ್ಯಾಯ ಸಿಗುತ್ತದೆಯೇ? ಇಲ್ಲ ಇನ್ಯಾರಿಗೋ ನ್ಯಾಯ ಸಿಗುತ್ತದೆಯೇ ಗೊತ್ತಿಲ್ಲ? ಸರ್ಕಾರದಿಂದ ತನಿಖೆ ನಡೆದಾಗ ತಾರ್ಕಿಕ ಅಂತ್ಯ ಕಾಣಲ್ಲ. ಇಡೀ ದೇಶದ ವ್ಯವಸ್ಥೆ ಅದೇ ರೀತಿ ಇದೆ. ಈಗ ರಾಜ್ಯದಲ್ಲಿಯೂ ಅದೇ ರೀತಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇಡೀ ಪ್ರಕರಣವನ್ನು ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದಾರೆ. ಸಿಡಿ ಪ್ರಕರಣದಲ್ಲಿ ಯಾರಿಗೂ ಗಂಭೀರತೆ ಇಲ್ಲವಾಗಿದೆ. ಇದರಿಂದ ರಾಜ್ಯದ ಗೌರವ ಹಾಳಾಗುತ್ತಿದೆ. ಎಸ್ಐಟಿ ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ರಾಜ್ಯದ ಗೌರವ ಉಳಿಸಲು ನಿಷ್ಪಕ್ಷಪಾತ ತನಿಖೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಹೆಣ್ಣು ಮಗಳ ಹಿಂದೆ ಇರುವವರು ಎಲ್ಲ ರೀತಿಯ ರಕ್ಷಣೆ ಕೊಟ್ಟಿದ್ದಾರೆ ಎನ್ನುವುದು ನನ್ನ ಮಾತಾಗಿದೆ. ಸರ್ಕಾರಕ್ಕೆ ಯುವತಿ ಟ್ರೇಸ್ ಆಗದೇ ಇದ್ದರೂ ಯುವತಿಗೆ ಸಿಗಬೇಕಾದ ರಕ್ಷಣೆ ಕೆಲವರಿಂದ ಸಿಕ್ಕಿದೆ. ಸರ್ಕಾರದ ಒಳಗಿನವರೋ, ವಿರುದ್ಧ ಇರುವವರೋ ಯಾರೋ ಆ ಯುವತಿಗೆ ಈಗಾಗಲೇ ರಕ್ಷಣೆ ನೀಡಿದ್ದಾರೆ. ಈ ಮನುಷ್ಯನ ಸ್ಪೀಡ್ ಗೆ ಬ್ರೇಕ್ ಹಾಕಲು ಸರ್ಕಾರದ ಒಳಗೆ ಇದ್ದವರೇ ರಕ್ಷಣೆ ಕೊಡುತ್ತಿದ್ದಾರೆಯೇ ಗೊತ್ತಿಲ್ಲ ಎಂದಿದ್ದಾರೆ.