alex Certify ಕೊರೋನಾ ಬಗ್ಗೆ ವಾಸ್ತವಕ್ಕೆ ದೂರವಾದ ಮಾಹಿತಿ: ಡಿಕೆಶಿ ಆಕ್ರೋಶ, ಸರ್ಕಾರಕ್ಕೆ ತರಾಟೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಬಗ್ಗೆ ವಾಸ್ತವಕ್ಕೆ ದೂರವಾದ ಮಾಹಿತಿ: ಡಿಕೆಶಿ ಆಕ್ರೋಶ, ಸರ್ಕಾರಕ್ಕೆ ತರಾಟೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ, ಕೈಗೊಳ್ಳಬೇಕಿರುವ ಕ್ರಮಗಳ ಕುರಿತಾಗಿ ಇಂದು ರಾಜ್ಯಪಾಲರ ನೇತೃತ್ವದಲ್ಲಿ ಸರ್ವಪಕ್ಷ ನಾಯಕರ ಮಹತ್ವದ ಸಭೆ ನಡೆಸಲಾಗಿದೆ.

ಸರ್ವಪಕ್ಷ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಕೊರೋನಾ ವಿಚಾರವಾಗಿ ಸರ್ಕಾರದ ಪರವಾಗಿ ಆರೋಗ್ಯ ಸಚಿವರು ಇಂದು ಬಿಡುಗಡೆ ಮಾಡಿರುವ ಮುಂಜಾಗ್ರತಾ ಕ್ರಮಗಳ ಪಟ್ಟಿ ವಾಸ್ತವಕ್ಕೆ ದೂರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಚಾರದಲ್ಲಿ ಸರ್ಕಾರ ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಬೇಕೇ ಹೊರತು, ಪ್ರತಿಷ್ಠೆಯಾಗಿ ಪರಿಗಣಿಸಬಾರದು. ನವೆಂಬರ್ 30 ರಂದು ಎರಡನೇ ಅಲೆ ಕುರಿತಾಗಿ ತಾಂತ್ರಿಕ ಸಮಿತಿ ಎಚ್ಚರಿಕೆ ನೀಡಿದ್ದರೂ ನಾವದ್ನು ಸರಿಯಾಗಿ ಪಾಲಿಸಲು ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಳ್ಳಬೇಕು. ಈ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ.   ಏನು ಕ್ರಮ ಕೈಗೊಳ್ಳದೇ, ನಾವು ಎಲ್ಲವನ್ನು ಸರಿಯಾಗೇ ಮಾಡಿದ್ದೇವೆ ಎಂಬ ಸಮರ್ಥನೆ ಬೇಡ. ಸರ್ಕಾರ ಸರಿಯಾಗಿ ಕ್ರಮಕೈಗೊಂಡಿದ್ದರೆ ಈ ಪರಿಸ್ಥಿತಿ ಯಾಕೆ ನಿರ್ಮಾಣವಾಗುತ್ತಿತ್ತು? ಎಂದು ಪ್ರಶ್ನಿಸಿದ್ದಾರೆ.

ನೀವು ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ನಾವು ಎಷ್ಟು ದಿನ ಇರುತ್ತೇವೋ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ. ಹಾಸಿಗೆ, ರೋಗಿಗಳ ಪರಿಸ್ಥಿತಿ ಬಗ್ಗೆ ನೀವೇ ಒಂದು ರಿಯಾಲಿಟಿ ಚೆಕ್ ಮಾಡಿ. ಕೇವಲ ನಾಲ್ಕು ಸಚಿವರು ಮಾತ್ರ ಸರ್ಕಾರ ಅಲ್ಲ. ಮುಖ್ಯಮಂತ್ರಿಗಳು ಸರ್ಕಾರ ಅಲ್ಲ. ಪಂಚಾಯ್ತಿಯಿಂದ ರಾಜ್ಯಮಟ್ಟದವರೆಗೆ ಎಲ್ಲ ಆಡಳಿತ ಯಂತ್ರವೂ ಸರ್ಕಾರವೇ. ಇದನ್ನು ಎಲ್ಲಿ ಬಳಸಿಕೊಳ್ಳಲಾಗಿದೆ. ಎಷ್ಟು ಜನ ಸಚಿವರು, ಜಿಲ್ಲಾ ಮಟ್ಟದಲ್ಲಿ ಸಭೆ ಮಾಡಿದ್ದಾರೆ? ಇನ್ನು ಮುಂದಾದರೂ ಸಮರೋಪಾದಿಯಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಶಿಕ್ಷಣ ಇಲಾಖೆ, ಆರೋಗ್ಯ, ಸಮಾಜ ಕಲ್ಯಾಣ ಸೇರಿ ಎಲ್ಲ ಇಲಾಖೆಗಳನ್ನು ಒಟ್ಟಾಗಿ ಸೇರಿಸಿಕೊಂಡು ಕಾರ್ಯಪ್ರವೃತ್ತರಾಗಬೇಕು. ಎಲ್ಲರಿಗೂ ಜವಾಬ್ದಾರಿ ವಹಿಸಬೇಕು. ಶವಗಳ ವಿಚಾರವಾಗಿ, ನಮ್ಮ ಧರ್ಮ, ಸಂಸ್ಕೃತಿ ಏನು ಹೇಳುತ್ತದೆ? ಯಾರೇ ಸಾಯುವಾಗ ಅವನಿಗೆ ಗೌರವಯುತ ಅಂತ್ಯ ಸಂಸ್ಕಾರ ಮಾಡಿ ಆತ್ಮಕ್ಕೆ ಶಾಂತಿ ಸಿಗಬೇಕು ಎನ್ನುತ್ತೇವೆ. ಬೆಂಗಳೂರು ಸುತ್ತ ಕೆಲವು ಸರ್ಕಾರಿ ಜಾಗಗಳಲ್ಲಿ ತಾತ್ಕಾಲಿಕ ಸ್ಮಶಾನ ನಿರ್ಮಾಣ ಮಾಡಲು ಸಾಧ್ಯವಿಲ್ಲವೇ? ಸರ್ಕಾರಕ್ಕೆ ಕನಿಷ್ಠ ಪರಿಜ್ಞಾನವೂ ಇಲ್ಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾವಿನ ವಿಚಾರದಲ್ಲಿ ಆಡಿಟ್ ಆಗಬೇಕು. ಈ ಸಾವುಗಳ ಸಂಖ್ಯೆ, ಅದರಲ್ಲಿ ಸಾವಿಗೆ ಕಾರಣದ ಬಗ್ಗೆ ಮಾಹಿತಿ ಪಡೆಯಬೇಕು. ಸರ್ಕಾರ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಲಿ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಗಮನ ಹರಿಸಲಿ. ಆರೋಗ್ಯ ಸೇವೆ ಎಲ್ಲರಿಗೂ ಸುವಂತೆ ಮಾಡಲು 30 ಸಾವಿರ ಕೋಟಿ ಮೀಸಲಿಡಿ.    ನೀವು ಹಿಂದೆ ಘೋಷಿಸಿದ ಪ್ಯಾಕೇಜ್ ನಲ್ಲಿ ಯಾರಿಗೆ ಹಣ ತಲುಪಿದೆ ಅಂತಾ ಒಂದು ಪಟ್ಟಿ ಕೊಡಿ. ರೈತರಿಗೆ ಹೇಗೆ ನೆರವಾದಿರಿ ಎಂಬ ಮಾಹಿತಿ ಕೊಡಿ. ಕೇಂದ್ರ ಸರ್ಕಾರದ 20 ಲಕ್ಷ ಕೋಟಿಯಲ್ಲಿ ನಮ್ಮ ರಾಜ್ಯದಲ್ಲಿ ಯಾರಿಗೆ ಅನುಕೂಲವಾಗಿದೆ ಹೇಳಿ ಎಂದು ಆಗ್ರಹಿಸಿದ್ದಾರೆ.

ಔಷಧಿ ಮತ್ತು ಲಸಿಕೆ ತಯಾರಿಕೆಗೆ ಕೇವಲ 2 ಕಂಪನಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಲಸಿಕೆ ಫಾರ್ಮುಲಾವನ್ನು ಕೊಟ್ಟು ಬೇರೆ ಕಂಪನಿಗಳಲ್ಲೂ ಉತ್ಪಾದನೆ ಮಾಡಿಸಿ. ಈ ಪರಿಸ್ಥಿತಿಯಲ್ಲಿ ಲಸಿಕೆ ರಫ್ತು ಮಾಡದಂತೆ ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ತಿಳಿಸಿಲಿ. ನಮ್ಮ ಮಕ್ಕಳನ್ನು ಮೊದಲು ಬದುಕಿಸಿ ಆಮೇಲೆ ಬೇರೆಯವರಿಗೆ ನೀಡಿ.  ಔಷಧಿ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಿರಿ. ಶಿಕ್ಷಣ ಸಂಸ್ಥೆ, ಮಕ್ಕಳು, ಪೋಷಕರು ಎಲ್ಲರ ಹಿತವನ್ನು ಕಾಪಾಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು. ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದೆ. ಅವರ ಜತೆ 5 ನಿಮಿಷ ಕರೆದು ಮಾತನಾಡದಿದ್ದರೆ ಈ ಸರ್ಕಾರ ಇರೋದು ಯಾತಕ್ಕಾಗಿ? ಸರ್ಕಾರ ಈ ಸಮಸ್ಯೆಯನ್ನು ಸರಿಯಾಗಿ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ರಾಜಕಾರಣದಲ್ಲಿ ನಮಗೆ ಬೇಕಾದಷ್ಟು ಭಿನ್ನಾಭಿಪ್ರಾಯಗಳಿದ್ದರೂ ಮಾನವೀಯತೆ ದೃಷ್ಟಿಯಿಂದ ನಾವು ಸರ್ಕಾರಕ್ಕೆ ಸಹಕಾರ ನೀಡುತ್ತೇವೆ. ಅದಕ್ಕೆ ಬದ್ಧರಾಗಿದ್ದೇವೆ. ಪರೀಕ್ಷೆ ನಡೆಸುವ ವಿಚಾರದಲ್ಲಿ ಪರಿಸ್ಥಿತಿ ಅರಿತು ನಿರ್ಧಾರ ಕೈಗೊಳ್ಳಿ. ಮುಖ್ಯಮಂತ್ರಿಗಳ ಅನಾರೋಗ್ಯ ಪರಿಸ್ಥಿತಿಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಿ ಈ ಸಭೆ ಕರೆದಿರುವುದನ್ನು ಸ್ವಾಗತಿಸುತ್ತೇವೆ. ಅವರಿಗೆ ಅಧಿಕಾರ ಇದೆಯೋ ಇಲ್ಲವೋ ಅನ್ನೋದು ಬೇರೆ ವಿಚಾರ. ಆದರೆ ಅವರ ಕಾಳಜಿಯನ್ನು ಮೆಚ್ಚುತ್ತೇನೆ. ಕೊರೋನಾ ಸೋಂಕಿಗೆ ತುತ್ತಾಗಿರುವ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಹಾಗೂ ಇತರ ನಾಯಕರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿಕೆಶಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...