ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕಿಡಾಗಿರುವ ನಟ ದರ್ಶನ್ ಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ. ದರ್ಶನ್ ವಿರುದ್ಧದ ಹಳೇ ಪ್ರಕರಣಗಳು ರೀ ಓಪನ್ ಆಗುತ್ತಿರುವ ಬೆನ್ನಲ್ಲೇ ಇದೀಗ ರಾಜಕಾಲುವೆ ಮೇಲೆ ನಿರ್ಮಿಸಿರುವ ಅವರ ಮನೆಗೂ ಸಂಚಕಾರ ಬಂದಿದೆ.
ರಾಜಕಾಲುವೆ ಒತ್ತುವರಿ ಮಾಡಿ ನಟ ದರ್ಶನ್ ಮನೆ ನಿರ್ಮಿಸಿದ್ದರೂ ಮನೆ ತೆರವುಗೊಳಿಸಲು ಬಿಬಿಎಂಪಿ ಹಿಂದೇಟು ಹಾಕಿತ್ತು. ಇದೀಗ ಈ ವಿಚಾರವಾಗಿ ಮಾತನಾಡಿರುವ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಯಾರೇ ಒತ್ತುವರಿ ಮಾಡಿ ಸ್ಟೇ ತಂದರೂ ಕೂಡ ಕಾನೂನು ಪ್ರಕಾರ ಮನೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಯಾರೇ ಒತ್ತುವರಿ ಮಾಡಿ ತಡೆಯಾಜ್ಞೆ ತಂದಿರಬಹುದು. ಆದರೆ ನಾವು ಕಾನೂನು ಪ್ರಕಾರ ಒತ್ತುವರಿ ಜಾಗ ತೆರವು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ನಟ ದರ್ಶನ್ ಅವರ ಆರ್.ಆರ್ ನಗರದ ಐಡಿಯಲ್ ಹೋಮ್ಸ್ ಬಳಿ ಇದ್ದ ಮನೆ ರಾಜಕಾಲುವೆ ಮೇಲೆ ಇದ್ದರೂ ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದರು. ಈ ವಿಚಾರ ಕೋರ್ಟ್ ನಲ್ಲಿದ್ದು, ಸ್ಟೇ ತಂದಿದ್ದಾರೆ ಎಂಬ ಸಮಜಾಯಿಷಿ ನೀಡಲಾಗುತ್ತಿತ್ತು. ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು. ಇದೀಗ ಪಾಲಿಕೆ ಅಧಿಕಾರಿಗಳಿಗೆ ದರ್ಶನ್ ಮನೆ ತೆರವಿಗೆ ಸರ್ಕಾರದಿಂದಲೇ ಮೌಖಿಕ ಆದೇಶ ನೀಡಲಾಗಿದೆ.