ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಡಿಸೆಂಬರ್ ಅಂತ್ಯದೊಳಗೆ ಸಿಎಂ ಆಗ್ತಾರೆ. ನಾನು ರಕ್ತದಲ್ಲಿ ಬರೆದುಕೊಡುತ್ತೇನೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಡಿದ ಶಾಸಕ ಬಸವರಾಜ್ ಶಿವಗಂಗಾ, ಡಿಸೆಂಬರ್ ಅಂತ್ಯದೊಳಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ. ಮುಂದಿನ 5 ವರ್ಷಗಳ ಕಾಲ ಅವರೇ ಸಿಎಂ ಆಗಿ ಇರಲಿದ್ದಾರೆ. ಅಂದರೆ ಒಟ್ಟು ಏಳೂವರೆ ವರ್ಷ ಅವರು ಅಧಿಕಾರಲ್ಲಿ ಇರುತ್ತಾರೆ ಎಂದು ಹೇಳಿದರು.
ನಮಗೆ ಬೇರೆ ಪಕ್ಷದ ಶಾಸಕರ ಅಗತ್ಯವಿಲ್ಲ. ನಮ್ಮ ಪಕ್ಷದಲ್ಲಿಯೇ ಬೇಕಾದಷ್ಟು ಶಾಸಕರಿದ್ದಾರೆ. ಹೈಕಮಾಂಡ್ ಮೊದಲು ಕೆ.ಎನ್.ರಾಜಣ್ಣ ಅವರ ಬಾಯಿ ಮುಚ್ಚಿಸಬೇಕು. ಹೈಕಮಾಂಡ್ ನಾಯಕರಿಗೆ ಎಲ್ಲವೂ ಗೊತ್ತು. ಡಿ.ಕೆ.ಶಿವಕುಮಾರ್ ಕಾರ್ಯವೈಖರಿ ಹೇಗಿದೆ ಎಂಬುದನ್ನು ಗಮನಿಸಿದ್ದಾರೆ. ಪಕ್ಷಕ್ಕಾಗಿ ದುಡಿದಿದ್ದಾರೆ. ಹಣ ಖರ್ಚು ಮಾಡಿದ್ದಾರೆ. ಪಕ್ಷ ಸಂಘಟನೆಯ ಕಾರ್ಯ ಯಾವರೀತಿಯಲ್ಲಿ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿದ್ದಾರೆ. 140 ಶಾಸಕರ ಬೆಂಬಲದೊಂದಿಗೆ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ. ಪಕ್ಷಕ್ಕಾಗಿ ದುಡಿದ ಡಿ.ಕೆ.ಶಿವಕುಮಾರ್ ಅವರಿಗೆ ನ್ಯಾಯಸಿಗದಿದ್ದರೆ ನಾವೆಲ್ಲ 70 ಶಾಸಕರು ವೇಸ್ಟ್. ಬರೆದಿಟ್ಟುಕೊಳ್ಳಿ ಡಿಸೆಂಬರ್ ನಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗೋದು ಖಚಿತ ಎಂದು ಹೇಳಿದರು.