ಬೆಂಗಳೂರು: ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡುವಂತೆ ಸಚಿವ ಸತೀಶ್ ಜಾರಕಿಹೊಳಿ ಹೈಕಮಾಂಡ್ ನಾಯಕರಿಗೆ ಮನವಿ ಮಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಗ್ಯಾರಂಟಿ ಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಗ್ಯಾರಂಟಿ ಯೋಜನೆಗಳ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಆದಾಯ ಹೆಚ್ಚಿಸುವುದರ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದರು.
ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದಕ್ಕೆ ಇಂದು ವಿಪಕ್ಷಗಳು ಕೈಹಿಸುಕಿಕೊಳ್ಳುತ್ತಿವೆ. ಗ್ಯಾರಂಟಿ ಯೋಜನೆಗಳ ಬದಲಾವಣೆ ಮಾಡುವುದಿಲ್ಲ. ಐದು ಗ್ಯಾರಂಟಿ ಯೊಜನೆಗಳೂ ಮುಂದುವರೆಯುತ್ತವೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ ಎಂಬುದು ಸುಳ್ಳು. ಎಲ್ಲಿ ದೂರು ಬಂದಿದೆ ಅಲ್ಲಿ ಪರಿಶೀಲಿಸಲಾಗುವುದು ಎಂದು ಹೇಳಿದರು.