![](https://kannadadunia.com/wp-content/uploads/2025/02/dks-air-show.jpg)
ಬೆಂಗಳೂರು: ಬೆಂಗಳೂರು, ಏರೋಸ್ಪೇಸ್ ಉದ್ಯಮದಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ಹೊಂದಿದೆ. ಇದು ವಿಮಾನ ಮತ್ತು ಹೆಲಿಕಾಪ್ಟರ್ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಸೂಕ್ತ ಸ್ಥಳವಾಗಿದೆ. ತಯಾರಕರಿಗೆ ಪ್ರೋತ್ಸಾಹ ನೀಡುವ ಮೂಲಕ, ಪ್ರತಿಭಾ ಪಲಾಯನವನ್ನು ತಡೆದು ನಮ್ಮ ದೇಶದ ಪ್ರತಿಭೆಗಳನ್ನು ಭಾರತದೊಳಗೆ ಉಳಿಸಿಕೊಳ್ಳಬಹುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಬೆಂಗಳೂರು ಏರ್ ಶೋ 2025 ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ರಕ್ಷಣಾ ಸಚಿವರು ಕರ್ನಾಟಕದಲ್ಲಿ ಏರೋಸ್ಪೇಸ್ ಉದ್ಯಮವನ್ನು ಸ್ಥಾಪಿಸಲು ಹಾಗೂ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ತಯಾರಕರನ್ನು ಹೆಚ್ಚು, ಹೆಚ್ಚು ಬೆಂಗಳೂರಿನ ಕಡೆಗೆ ಗಮನ ಹರಿಸುವಂತೆ ಪ್ರೋತ್ಸಾಹ ನೀಡಬೇಕಾಗಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ಕರ್ನಾಟಕ ಭಾರತದ ತಾಂತ್ರಿಕ ಮತ್ತು ಕೈಗಾರಿಕಾ ಪ್ರಗತಿಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ವಿಶ್ವ ದರ್ಜೆಯ ಸಂಶೋಧನಾ ಸಂಸ್ಥೆಗಳು, ಅತ್ಯಾಧುನಿಕ ಏರೋಸ್ಪೇಸ್ ಕಂಪನಿಗಳನ್ನು ಹೊಂದಿರುವ ಕೌಶಲ್ಯಪೂರ್ಣ ಕಾರ್ಯಪಡೆಯೇ ನಮ್ಮಲ್ಲಿದೆ ಎಂದರು. ಇತ್ತೀಚಿನ ವರ್ಷಗಳಲ್ಲಿ, ಕರ್ನಾಟಕವು ದೇಶದ ಒಟ್ಟು ದೇಶೀಯ ಉತ್ಪನ್ನ, ಕೈಗಾರಿಕಾ ಬೆಳವಣಿಗೆ ಮತ್ತು ಹೂಡಿಕೆಯ ಒಳಹರಿವು ಸೇರಿದಂತೆ ಪ್ರಮುಖ ಆರ್ಥಿಕ ಕ್ಷೇತ್ರಗಳಲ್ಲಿ ಅಗಾಧ ಬೆಳವಣಿಗೆ ಕಂಡಿದೆ” ಎಂದರು.
ಸಂಶೋಧನೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಉದ್ದಿಮೆಗೆ ಪ್ರೋತ್ಸಾಹಿಸುವ ಭವಿಷ್ಯದ ದೃಷ್ಟಿಯಿಂದ ಕೈಗಾರಿಕಾ ನೀತಿಯನ್ನು ಪೋಷಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಆಕಾಶಕ್ಕೆ ಮಿತಿಯಿಲ್ಲ ಎಂಬುದನ್ನು ಈ ಏರ್ ಶೋ ಮೂಲಕ ನಾವು ಕಂಡುಕೊಳ್ಳಬಹುದು. ಬೆಂಗಳೂರು ಏರ್ ಶೋ ನಾಗರಿಕ ಮತ್ತು ಮಿಲಿಟರಿ ವಾಯುಯಾನ ಎರಡರಲ್ಲೂ ಭಾರತದ ಪ್ರಗತಿಯನ್ನು ಎತ್ತಿ ತೋರಿಸುವ ದೊಡ್ಡ ಕಾರ್ಯಕ್ರಮ ಎಂದು ತಿಳಿಸಿದರು.
ಏರೋ ಇಂಡಿಯಾ ಕೇವಲ ಪ್ರದರ್ಶನವಲ್ಲ. ಇದು ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಭಾರತದ ಸಾಮರ್ಥ್ಯ ಬೆಳೆಯುತ್ತಿರುವುದಕ್ಕೆ ಸಾಕ್ಷಿ ಮತ್ತು ಅಂತರರಾಷ್ಟ್ರೀಯ ಪಾಲುದಾರಿಕೆಗಳನ್ನು ಬೆಳೆಸುವ ವೇದಿಕೆ ಎಂದರು.
2013 ರಲ್ಲಿ ಏರೋಸ್ಪೇಸ್ ನೀತಿಯನ್ನು ಘೋಷಿಸಿದ ಮೊದಲ ರಾಜ್ಯ ಕರ್ನಾಟಕ. ನಮ್ಮ ರಾಜ್ಯವು ದೇವನಹಳ್ಳಿ ಬಳಿ ಏರೋಸ್ಪೇಸ್ ಕಂಪನಿಗಳಿಗಾಗಿ 1 ಸಾವಿರ ಎಕರೆ ಪ್ರದೇಶವನ್ನು ಮೀಸಲಿಟ್ಟು ಏರೋಸ್ಪೇಸ್ ಪಾರ್ಕ್ ಸ್ಥಾಪಿಸಿದೆ ಎಂದರು.
ಇಂದು ಏರೋಸ್ಪೇಸ್ ಉದ್ಯಮವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಬೆಂಗಳೂರು ಅತ್ಯುತ್ತಮ ನಗರವಾಗಿದೆ. ಅನೇಕ ಬ್ರ್ಯಾಂಡ್‌ಗಳು ಮತ್ತು ಅತ್ಯುತ್ತಮ ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಬೆಂಗಳೂರು ಸೂಕ್ತ ಸ್ಥಳವಾಗಿದೆ ಎಂದರು.
ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲು, ಉದ್ದಿಮೆಗಳ ಅತ್ಯುತ್ತಮ ಉತ್ಪನ್ನಗಳನ್ನು ಪರೀಕ್ಷಿಸಲು ಇದು ಸೂಕ್ತ ಸ್ಥಳವಾಗಿದೆ. ಏರೋಸ್ಪೇಸ್ ಭವಿಷ್ಯವು ರೂಪುಗೊಳ್ಳುತ್ತಿರುವ ಸ್ಥಳವೇ ಬೆಂಗಳೂರು ಎಂದು ಹೇಳಿದರು.
ಬೆಂಗಳೂರು ಭಾರತದ ಏರೋಸ್ಪೇಸ್ ರಾಜಧಾನಿ. ದೇಶದ ಏರೋಸ್ಪೇಸ್ ಉತ್ಪಾದನೆ ಮತ್ತು ರಕ್ಷಣಾ ಸಂಶೋಧನೆಯ ಶೇ. 60 ಕ್ಕಿಂತ ಹೆಚ್ಚು ಕೊಡುಗೆಯನ್ನು ನಮ್ಮ ರಾಜ್ಯ ನೀಡುತ್ತಿದೆ ಎಂದರು.
ಎಚ್ ಎಎಲ್, ಇಸ್ರೋ ಮತ್ತು ಬೋಯಿಂಗ್ ಇಂಡಿಯಾದಂತಹ ಪ್ರಮುಖ ಸಂಸ್ಥೆಗಳು ಭಾರತದ ರಕ್ಷಣಾ ಮತ್ತು ಬಾಹ್ಯಾಕಾಶ ಸಾಮರ್ಥ್ಯಗಳಿಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿವೆ. ಬೆಂಗಳೂರಿನ ಏರೋಸ್ಪೇಸ್ ವಲಯದಲ್ಲಿ 1,50,000 ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ, ಇದು ನಗರವನ್ನು ವಾಯುಯಾನ ಮತ್ತು ರಕ್ಷಣಾ ತಂತ್ರಜ್ಞಾನದಲ್ಲಿ ಜಗತ್ತಿನಲ್ಲಿಯೇ ಸಾಕಷ್ಟು ಹೆಸರು ಮಾಡಿದೆ ಎಂದರು.
ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಬೆಂಗಳೂರು ಜಾಗತಿಕ ಏರೋಸ್ಪೇಸ್ ನಗರಗಳಲ್ಲಿ ಮೂರನೇ ಸ್ಥಾನವನ್ನು ಪಡೆದಿದೆ. ಕರ್ನಾಟಕ ಸರ್ಕಾರವು ಕರ್ನಾಟಕದಾದ್ಯಂತ ಅಂದರೆ ಬೆಂಗಳೂರು, ಬೆಳಗಾವಿ, ಮೈಸೂರು, ತುಮಕೂರು ಮತ್ತು ಚಾಮರಾಜನಗರಗಳಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಕೇಂದ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದರು.
ವಾಣಿಜ್ಯ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಕ್ರಾಂತಿಯನ್ನೇ ಉಂಟು ಮಾಡುತ್ತಿರುವ ಡ್ರೋನ್ ತಂತ್ರಜ್ಞಾನ ಮತ್ತು ಮಾನವರಹಿತ ವೈಮಾನಿಕ ತಂತ್ರಜ್ಞಾನದ ರುವಾರಿಯಾಗಿ ಬೆಂಗಳೂರು ಬೆಳೆಯುತ್ತಿದೆ ಎಂದರು.
ಬೆಂಗಳೂರು ಭಾರತದಲ್ಲಿಯೇ ಅತಿ ಹೆಚ್ಚು ಸಾಫ್ಟ್‌ವೇರ್ ಕಂಪನಿಗಳನ್ನು ಹೊಂದಿದೆ. ಅದಕ್ಕೆ ಇದನ್ನು ಭಾರತದ ಸಿಲಿಕಾನ್ ಸಿಟಿ ಎಂದು ಕರೆಯುತ್ತಾರೆ. ತಂತ್ರಜ್ಞಾನ ಮತ್ತು ಏರೋಸ್ಪೇಸ್ ವಲಯವನ್ನು ಮುನ್ನಡೆಸುವ ನಗರವಾಗಿ ಬೆಂಗಳೂರು ಬೆಳೆದಿದೆ ಎಂದು ಹೇಳಿದರು.