ಮುಂಬೈ: ಖ್ಯಾತ ಉದ್ಯಮಿ, ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತಕ್ಕೀಡಾದ ಈ ಮರ್ಸಿಡಿಸ್ ಕಾರ್ ಅನ್ನು ಮುಂಬೈನ ಸ್ತ್ರೀರೋಗ ತಜ್ಞೆ ಚಾಲನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈನ ಪ್ರಸಿದ್ಧ ಸ್ತ್ರೀರೋಗತಜ್ಞರೊಬ್ಬರು ಭಾನುವಾರ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರ್ ಚಾಲನೆ ಮಾಡುತ್ತಿದ್ದು, ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಮತ್ತು ವಾಹನದಲ್ಲಿದ್ದ ಇನ್ನೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಕಾರ್ ಅತಿವೇಗದಿಂದ ಚಲಿಸುತ್ತಿತ್ತು. ರಾಂಗ್ ಸೈಡ್ ನಿಂದ(ಎಡದಿಂದ) ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿತ್ತು. ಅಪಘಾತದಲ್ಲಿ ಸ್ತ್ರೀರೋಗತಜ್ಞೆ ಅನಾಹಿತಾ ಪಾಂಡೋಲೆ(55) ಮತ್ತು ಅವರ ಪತಿ ಡೇರಿಯಸ್ ಪಾಂಡೋಲೆ(60) ಬದುಕುಳಿದಿದ್ದಾರೆ, ಸೈರಸ್ ಮಿಸ್ತ್ರಿ (54) ಮತ್ತು ಡೇರಿಯಸ್ ಅವರ ಸಹೋದರ ಜಹಾಂಗೀರ್ ಪಾಂಡೋಲೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಸುಮಾರು 120 ಕಿ.ಮೀ. ಗೂ ಅಧಿಕ ವೇಗದಲ್ಲಿ ಕಾರ್ ಚಾಲನೆ ಮಾಡಲಾಗುತ್ತಿತ್ತು. ಮಿಸ್ತ್ರಿ ಮತ್ತು ಜಹಾಂಗೀರ್ ಹಿಂದಿನ ಸೀಟಿನಲ್ಲಿ ಇದ್ದರು. ಡೇರಿಯಸ್ ಅನಾಹಿತಾ ಅವರೊಂದಿಗೆ ಮುಂಭಾಗದ ಸೀಟಿನಲ್ಲಿದ್ದರು. ಅಪಘಾತವಾದಾಗ ಹಿಂಭಾಗದಲ್ಲಿ ಏರ್ ಬ್ಯಾಗ್ ಓಪನ್ ಆಗದಿರುವುದೇ ಹಿಂಬದಿ ಇದ್ದ ಇಬ್ಬರ ಸಾವಿಗೆ ಕಾರಣವೆನ್ನಲಾಗಿದೆ.
ಮಹಿಳೆಯೊಬ್ಬರು ಕಾರ್ ಚಾಲನೆ ಮಾಡುತ್ತಿದ್ದು, ಎಡಭಾಗದಿಂದ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದರು, ಆದರೆ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ರಸ್ತೆಬದಿಯ ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ಪ್ರತ್ಯಕ್ಷದರ್ಶಿ, ನಾವು ಅಪಘಾತದ ಸ್ಥಳಕ್ಕೆ ಧಾವಿಸಿದೆವು. ಆದರೆ, ವಾಹನ ಅಥವಾ ಗಾಯಗೊಂಡ ವ್ಯಕ್ತಿಗಳನ್ನು ಮುಟ್ಟಲಿಲ್ಲ. 10 ನಿಮಿಷಗಳಲ್ಲಿ ಗಾಯಗೊಂಡ ಇಬ್ಬರನ್ನು ಕಾರಿನಿಂದ ಹೊರತೆಗೆದು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಉಳಿದ ಇಬ್ಬರು ಮೃತಪಟ್ಟಿದ್ದರು ಎಂದು ಹೇಳಿದ್ದಾರೆ.