ನವದೆಹಲಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ತೇಜ್ ಹೆಸರಿನ ಚಂಡಮಾರುತ ಸೃಷ್ಟಿಯಾಗುವ ಸಂಭವ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಅರಬ್ಬಿ ಸಮುದ್ರದ ಆಗ್ನೇಯ ಮತ್ತು ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಚಂಡಮಾರುತ ಸೃಷ್ಟಿಯಾಗುವ ಸಂಭವ ಇದೆ. ಇದು ಈ ವರ್ಷ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗುವ ಎರಡನೇ ಚಂಡಮಾರುತ ಆಗಲಿದೆ.
ಹಿಂದೂ ಮಹಾಸಾಗರ ವಲಯದಲ್ಲಿ ಅನುಸರಿಸುವ ನಿಯಮಕ್ಕೆ ಅನುಗುಣವಾಗಿ ಈ ಚಂಡಮಾರುತಕ್ಕೆ ತೇಜ್ ಎಂದು ಹೆಸರಿಸಲಾಗಿದೆ. ಭಾನುವಾರದ ವೇಳೆಗೆ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡು ಓಮನ್ ಮತ್ತು ಯೆಮನ್ ನತ್ತ ಸಾಗಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ ಹೇಳಿದೆ.
ಜೂನ್ ನಲ್ಲಿ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿ ಬಿಪರ್ ಜಾಯ್ ಚಂಡಮಾರುತ ಸೃಷ್ಟಿಯಾಗಿತ್ತು. ದಿಕ್ಕು ಬದಲಾಯಿಸಿ ಗುಜರಾತ್, ಪಾಕಿಸ್ತಾನ ತೀರಗಳಿಗೆ ಅಪ್ಪಳಿಸಿತ್ತು.