ಚೆನ್ನೈ: ತಮಿಳುನಾಡು, ಪುದುಚೇರಿಯಲ್ಲಿ ನಿವಾರ್ ಚಂಡಮಾರುತದ ಪರಿಣಾಮ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ತಮಿಳುನಾಡಿನ ಕರಾವಳಿಗೆ ನಿವಾರ್ ಚಂಡಮಾರುತ ಬಂದಪ್ಪಳಿಸಿದೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಚಂಡಮಾರುತವು ಭೂಸ್ಪರ್ಶ ಮಾಡಿದೆ. ತಮಿಳುನಾಡು ರಾಜಧಾನಿ ಚೆನ್ನೈ ಸೇರಿದಂತೆ 13 ಜಿಲ್ಲೆಗಳಲ್ಲಿ ಭಾರೀ ಮಳೆಯ ಕಾರಣ ರಜೆ ಘೋಷಣೆ ಮಾಡಲಾಗಿದೆ.
135 ಕಿಲೋಮೀಟರ್ ವೇಗದ ನಿವಾರ್ ಚಂಡಮಾರುತ ಪುದುಚೇರಿ, ತಮಿಳುನಾಡು ಕರಾವಳಿಗೆ ಅಪ್ಪಳಿಸಿದ ಪರಿಣಾಮ ಭಾರೀ ಮಳೆಯಾಗುತ್ತಿದ್ದು, ಒಂದು ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಆಂಧ್ರಪ್ರದೇಶದಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ಕರ್ನಾಟಕದ ದಕ್ಷಿಣ ಭಾಗದ 7 ಜಿಲ್ಲೆಗಳು, ಕೇರಳ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ.
ರಕ್ಷಣಾ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಎನ್.ಡಿ.ಆರ್.ಎಫ್. ನೌಕಾಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿರುವುದರಿಂದ ಚೆನ್ನೈ ಸೇರಿದಂತೆ ಅನೇಕ ಮಹಾನಗರದ ರಸ್ತೆಗಳೆಲ್ಲ ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿದೆ. ಚಂಡಮಾರುತದ ಪರಿಣಾಮ ಭಾರೀ ಮಳೆಯ ಅಬ್ಬರ ಮುಂದುವರಿದಿದೆ. ಚೆನ್ನೈ ಏರ್ಪೋರ್ಟ್ ಮುಚ್ಚಲಾಗಿದ್ದು ಅನೇಕ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. 13 ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಲಾಗಿದ್ದು, ಮನೆಯಿಂದ ಹೊರಗೆ ಬರದಂತೆ ಎಚ್ಚರಿಕೆ ನೀಡಲಾಗಿದೆ.