ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಮಿಚಾಂಗ್ ಚಂಡಮಾರುತ ಸೃಷ್ಟಿಯಾಗಿದ್ದು, ವಾಯುಭಾರ ಕುಸಿತ ಪರಿಣಾಮ ಡಿಸೆಂಬರ್ 5 ರವರೆಗೆ ಮಳೆಯಾಗುವ ಸಂಭವ ಇದೆ.
ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಸೃಷ್ಟಿಯಾಗಿರುವ ಚಂಡಮಾರುತ ನೈರುತ್ಯ ಭಾಗದಲ್ಲಿ ಕೇಂದ್ರೀಕೃತಗೊಂಡಿದೆ. ಪುದುಚೇರಿಯಿಂದ 730 ಕಿ.ಮೀ., ಚೆನ್ನೈನಿಂದ 740 ಕಿ.ಮೀ., ನೆಲ್ಲೂರುನಿಂದ 860 ಕಿ.ಮೀ. ದೂರದಲ್ಲಿ ಚಂಡಮಾರುತ ಚಲನೆಯಲ್ಲಿದೆ.
ಡಿಸೆಂಬರ್ 4ರಂದು ಸಂಜೆ ವೇಳೆಗೆ ಚೆನ್ನೈ ಕರಾವಳಿಗೆ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾನುವಾರದ ವೇಳೆಗೆ ಚಂಡಮಾರುತ ತೀವ್ರ ಸ್ವರೂಪ ಪಡೆಯಲಿದ್ದು, ಆಂಧ್ರಪ್ರದೇಶಕ್ಕೆ ಹೊಂದಿಕೊಂಡ ತಮಿಳುನಾಡು ಕರಾವಳಿ ಕಡೆಗೆ ಸಾಗಲಿದೆ. ಡಿಸೆಂಬರ್ 4ರಂದು ಚೆನ್ನೈ ಕರಾವಳಿ ಭಾಗಕ್ಕೆ ಅಪ್ಪಳಿಸಲಿದೆ. ನಂತರ ಆಂಧ್ರಪ್ರದೇಶದತ್ತ ಸಾಗಲಿರುವ ಚಂಡಮಾರುತ ನೆಲ್ಲೂರು, ಮಚಲೀಪಟ್ಟಣ ಹಾದು ಹೋಗಲಿದೆ. ಚಂಡಮಾರುತ ವೇಗ ಗಂಟೆಗೆ 100 ಕಿ.ಮೀ. ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತದ ಪ್ರಭಾವದಿಂದ ತಮಿಳುನಾಡು, ಆಂಧ್ರಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಕಾರಣ ರೆಡ್ ಅಲರ್ಟ್ ನೀಡಲಾಗಿದೆ.