ಬೆಂಗಳೂರು: ಫಂಗಲ್ ಚಂಡಮಾರುತದ ಪರಿಣಾಮ ರಾಜ್ಯಕ್ಕೂ ತಟ್ಟಿದ್ದು, ಡಿಸೆಂಬರ್ 2 ರಂದು 14 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.
ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಹಿನ್ನಲೆಯಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ. ಈ ಜಿಲ್ಲೆಗಳ ಕೆಲವು ಕಡೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಕರಾವಳಿ ಪ್ರದೇಶ, ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಂಭವ ಇದೆ.
ಡಿಸೆಂಬರ್ 3ರಂದು ಕೂಡ ರಾಜ್ಯದ ವಿವಿಧೆಡೆ ಭಾರಿ ಮಳೆ ಆಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಕೊಡಗು, ಉಡುಪಿ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.