ಮಂಗಳೂರು/ಉಡುಪಿ: ರಾಜ್ಯದ ಕರಾವಳಿ ಪ್ರದೇಶದಲ್ಲಿ ‘ತೌಕ್ತೆ’ ಚಂಡಮಾರುತ ಅಬ್ಬರ ತೀವ್ರವಾಗಿದೆ. ಮಂಗಳೂರಿನ ಎಂಆರ್ಪಿಎಲ್ ಗೆ ಸಂಬಂಧಿಸಿದ ಟಗ್ ಬೋಟ್ ಗಳು ಮುಳುಗಡೆಯಾಗಿ ಮೂವರು ಸಾವನ್ನಪ್ಪಿದ್ದಾರೆ.
ಮೂವರು ನಾಪತ್ತೆಯಾಗಿದ್ದು, 9 ಮಂದಿ ಅತಂತ್ರರಾಗಿದ್ದಾರೆ. ಲಂಗರು ಹಾಕಿದ ಸ್ಥಳದಲ್ಲಿಯೇ 9 ಮಂದಿ ನೌಕರರು ಸಿಲುಕಿದ್ದಾರೆ. ಚಂಡಮಾರುತದ ನಡುವೆ ಸಮುದ್ರದಲ್ಲಿ ಇರಬೇಕಾಗಿದೆ. ರಾತ್ರಿಪೂರ್ತಿ ಸಮುದ್ರದಲ್ಲಿರುವ ನೌಕರರನ್ನು ರಕ್ಷಿಸಲು ಪ್ರಯತ್ನಿಸಿ ಅಲೆಗಳ ಅಬ್ಬರದ ಕಾರಣ ಕಾರ್ಯಾಚರಣೆ ನಿಲ್ಲಿಸಿದ್ದು, ಮತ್ತೆ ಆರಂಭಿಸಲಾಗಿದೆ.
ಸುರತ್ಕಲ್ ನ 17 ನಾಟಿಕಲ್ ಮೈಲು ದೂರದಲ್ಲಿರುವ ನೌಕರರನ್ನು ರಕ್ಷಿಸಲು ಗಾಳಿ, ಅಲೆಗಳ ಅಬ್ಬರ ಕಡಿಮೆಯಾದ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತದೆ.
ಚಂಡಮಾರುತ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಿನಕ್ಕೆ 65 ರಿಂದ 115 ಮಿಲಿಮೀಟರ್ ಮಳೆಯಾಗುವ ಸಾಧ್ಯತೆ ಇದೆ. ಮೀನುಗಾರಿಕೆಗೆ ತೆರಳದಂತೆ ಉಡುಪಿ ಜಿಲ್ಲಾಡಳಿತ ಸೂಚನೆ ನೀಡಿದೆ. ಸಮುದ್ರ ಮತ್ತು ನದಿ ಪಾತ್ರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.