ಭುವನೇಶ್ವರ: ಭಾನುವಾರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಮಂಗಳವಾರದ ವೇಳೆಗೆ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.
ಒಡಿಶಾದ ಪಾರದೀಪ್ ನಿಂದ 610 ಕಿ.ಮೀ. ದಕ್ಷಿಣಕ್ಕೆ ವಾಯುಭಾರ ಕುಸಿತ ಚಂಡಮಾರುತವಾಗಿ ಸೃಷ್ಟಿಯಾಗಲಿದ್ದು, ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರವಾಗುವ ಲಕ್ಷಣಗಳಿವೆ. ಅದಾದ 12 ಗಂಟೆಗಳಲ್ಲಿ ವಾಯುವ್ಯ ದಿಕ್ಕಿಗೆ ತಿರುಗಿ ಬಂಗಾಳ, ಬಾಂಗ್ಲಾದೇಶ ಕರಾವಳಿ ಕಡೆಗೆ ತೆರಳಬಹುದು. ಅಕ್ಟೋಬರ್ 25 ರ ವರೆಗೂ ಪೂರ್ವ ಕರಾವಳಿ ಭಾಗದಲ್ಲಿ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಪೂರ್ವ ಕರಾವಳಿ ಪ್ರದೇಶದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ತೇಜ್ ಚಂಡಮಾರುತ ತೀವ್ರ ಸ್ವರೂಪ ಪಡೆದು ಓಮನ್, ಯೆಮನ್ ಕರಾವಳಿಯ ಕಡೆಗೆ ಮುನ್ನುಗ್ಗುತ್ತಿದೆ. ಇದರಿಂದ ಭಾರತದ ಮೇಲೆ ಇದರಿಂದ ಯಾವುದೇ ಪರಿಣಾಮವಿಲ್ಲ ಎಂದು ಹೇಳಲಾಗಿದೆ.