
ಸೈಬರ್ ಸುಲಿಗೆಯ ಆಘಾತಕಾರಿ ಪ್ರಕರಣದಲ್ಲಿ ಅಹಮದಾಬಾದ್ ನ ನಾರಣಪುರದ 27 ವರ್ಷದ ಮಹಿಳೆಯೊಬ್ಬರು ಅತ್ಯಾಧುನಿಕ ವಂಚನೆಗೆ ಒಳಗಾಗಿದ್ದಾರೆ.
ಕೇಂದ್ರ ತನಿಖಾ ಏಜೆನ್ಸಿಗಳ ಅಧಿಕಾರಿಗಳೆಂದು ಯಾಮಾರಿಸಿದ ಸೈಬರ್ ಅಪರಾಧಿಗಳು 5 ಲಕ್ಷ ರೂ. ದೋಚಿದ್ದಾರೆ. ಹೇಮಾಲಿ ಪಾಂಡ್ಯ ಎಂಬ ಮಹಿಳೆ ದೂರು ದಾಖಲಿಸಿದ್ದು, ಕಠಿಣ ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ(ಎನ್‌ಡಿಪಿಎಸ್) ಕಾಯ್ದೆಯಡಿ ಕಾನೂನು ಕ್ರಮ ಜರುಗಿಸುವುದಾಗಿ ವಂಚಕರು ಬೆದರಿಕೆ ಹಾಕಿದ್ದಾರೆ.
ಡಿಜಿಟಲ್ ಅರೆಸ್ಟ್ ವೇಳೆ ಅವರು ಆಕೆಯ ವೆಬ್‌ಕ್ಯಾಮ್ ಮುಂದೆ ವಿವಸ್ತ್ರವಾಗುವಂತೆ ಒತ್ತಾಯಿಸಿದ್ದಾರೆ. ಮತ್ತು ಅದನ್ನು ಅವರು ‘ಡಿಜಿಟಲ್ ಬಂಧನ’ ಎಂದು ತಪ್ಪಾಗಿ ತಿಳಿಸಿ ಬೆದರಿಸಿದ್ದಾರೆ.
ನಾರಣಪುರ ಪೊಲೀಸರಿಗೆ ಸಲ್ಲಿಸಿದ ಪ್ರಥಮ ಮಾಹಿತಿ ವರದಿ(ಎಫ್‌ಐಆರ್) ಪ್ರಕಾರ, 132 ಅಡಿ ರಿಂಗ್ ರೋಡ್ ನಲ್ಲಿರುವ ಸಮರ್ಪನ್ ಟವರ್ ನಲ್ಲಿ ವಾಸವಾಗಿರುವ ಪಾಂಡ್ಯ ಅವರಿಗೆ ಕೊರಿಯರ್ ಕಂಪನಿ ಉದ್ಯೋಗಿಯಂತೆ ನಟಿಸುವ ವ್ಯಕ್ತಿಯಿಂದ ಅಕ್ಟೋಬರ್ 13 ರಂದು ಅನುಮಾನಾಸ್ಪದ ಕರೆ ಬಂದಿದೆ. ಮೂರು ಲ್ಯಾಪ್‌ಟಾಪ್‌ಗಳು, ಎರಡು ಸೆಲ್ ಫೋನ್‌ಗಳು, 150 ಗ್ರಾಂ ಮೆಫೆಡ್ರೋನ್ ಮತ್ತು 1.5 ಕೆಜಿ ಬಟ್ಟೆಗಳನ್ನು ಒಳಗೊಂಡಿರುವ ಆಕೆಯ ಹೆಸರನ್ನು ಹೊಂದಿರುವ ಪಾರ್ಸೆಲ್ ಅನ್ನು ಥೈಲ್ಯಾಂಡ್‌ಗೆ ಕಳುಹಿಸಲಾಗಿದೆ ಎಂದು ಕರೆ ಮಾಡಿದವರು ಹೇಳಿದ್ದು, ಸೈಬರ್ ಕ್ರೈಂ ಅಧಿಕಾರಿಗಳನ್ನು ತುರ್ತಾಗಿ ಸಂಪರ್ಕಿಸುವಂತೆ ಪಾಂಡ್ಯ ಅವರಿಗೆ ಸೂಚಿಸಿದ್ದಾರೆ.
ಗಾಬರಿಯಾದ ಪಾಂಡ್ಯ ಸೈಬರ್ ಕ್ರೈಮ್ ಸಹಾಯವಾಣಿಗೆ ಸಂಪರ್ಕಿಸಿದ್ದಾಳೆ. ದೆಹಲಿಯ ಸೈಬರ್ ಕ್ರೈಮ್ ಅಧಿಕಾರಿಯಂತೆ ನಟಿಸಿದ ಅಪರಿಚಿತನೊಬ್ಬನಿಂದ ವಾಟ್ಸಾಪ್ ಕರೆ ಸ್ವೀಕರಿಸಿದ್ದಾಳೆ. ‘ಅಧಿಕಾರಿ’ ಎಂದು ಹೇಳಿಕೊಂಡ ವ್ಯಕ್ತಿ ಮಾದಕದ್ರವ್ಯದ ತನಿಖೆಯಲ್ಲಿ ಪಾಂಡ್ಯ ಹೆಸರು ಕೇಳಿ ಬಂದ ಬಗ್ಗೆ ತಿಳಿಸಿದ್ದಾನೆ. ವೀಡಿಯೊ ಕಾನ್ಫರೆನ್ಸ್ ನಲ್ಲಿ ಭಾಗವಹಿಸುವಂತೆ ಒತ್ತಾಯಿಸಿದ್ದಾನೆ. ಸುಳ್ಳನ್ನೇ ನಿಜವೆಂದು ನಂಬಿಸಲು ಪಾಂಡ್ಯ ಅವರನ್ನು ಮಾದಕವಸ್ತು ಕಳ್ಳಸಾಗಣೆ ಮತ್ತು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಿಲುಕಿಸಿದ ನಕಲಿ ಪತ್ರಗಳನ್ನು ಕಳುಹಿಸಿದ್ದಾನೆ.
ಜೈಲು ಶಿಕ್ಷೆಯ ಭಯದಿಂದ ಪಾಂಡ್ಯ ಇಷ್ಟವಿಲ್ಲದೆ ವೀಡಿಯೊ ಕರೆಗೆ ಸೇರಿಕೊಂಡಿದ್ದು, ಕರೆಯ ಸಮಯದಲ್ಲಿ ಒಬ್ಬ ವ್ಯಕ್ತಿ ತನ್ನ ಮುಖವನ್ನು ಮರೆಮಾಚಿಕೊಂಡು ಸಿಬಿಐ ಅಧಿಕಾರಿಯಂತೆ ಪೋಸ್ ನೀಡುತ್ತಾ, ಆಕೆಯ ದೇಹದ ಮೇಲಿನ ಜನ್ಮ ಗುರುತುಗಳನ್ನು ಬಹಿರಂಗಪಡಿಸುವ ಮೂಲಕ ತನ್ನ ಗುರುತನ್ನು ಸಾಬೀತುಪಡಿಸಲು ಆಕೆಯನ್ನು ವಿವಸ್ತ್ರಗೊಳಿಸುವಂತೆ ಒತ್ತಾಯಿಸಿದ್ದಾನೆ. ಆಕೆ ಆರಂಭಿಕ ಹಿಂಜರಿಕೆಯ ಹೊರತಾಗಿಯೂ ಜೈಲು ಶಿಕ್ಷೆಯ ಬೆದರಿಕೆಯಿಂದಾಗಿ ಅವರು ಹೇಳಿದಂತೆ ಕೇಳಿದ್ದಾಳೆ, ಆಘಾತಕಾರಿ ವಿಷಯವೆಂದರೆ ವೀಡಿಯೊ ಕರೆ ಸಮಯದಲ್ಲಿ ಮಹಿಳಾ ಅಧಿಕಾರಿಯೂ ಸಹ ಇದ್ದರು, ಆಕೆಯನ್ನು ವಸ್ತ್ರಾಪಹರಣ ಮಾಡುವಂತೆ ಒತ್ತಡ ಹೇರಿದ್ದರು.
ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ಮಾನಸಿಕ ಹಿಂಸೆ ನೀಡಿದ ವಂಚಕರು ಆಕೆಯ ಉಳಿತಾಯ ಖಾತೆಯಿಂದ ಹಣ ದೋಚಿದ್ದಾರೆ. ವಿವಿಧ ಖಾತೆಗಳಿಗೆ ಸರಿಸುಮಾರು 4.92 ಲಕ್ಷ ರೂ.ಗಳನ್ನು ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ. ಆಕೆ ತನ್ನ ಖಾತೆಯಲ್ಲಿದ್ದ ಹಣವನ್ನೆಲ್ಲಾ ವರ್ಗಾವಣೆ ಮಾಡಿದ್ದಾಳೆ.
ಪಾಂಡ್ಯ ತನ್ನ ಸಂಕಟವನ್ನು ನೆರೆಹೊರೆಯವರೊಂದಿಗೆ ಹಂಚಿಕೊಂಡಾಗ, ನೆರೆಹೊರೆಯವರು ಧೈರ್ಯದಿಂದ ಫೋನ್ ಮೂಲಕ ವಂಚಕರಲ್ಲಿ ಒಬ್ಬರನ್ನು ಎದುರಿಸಿದರು. ಆಘಾತಕಾರಿಯಾಗಿ, ವಂಚಕನು ಥಟ್ಟನೆ ಕರೆಯನ್ನು ಕಡಿತಗೊಳಿಸುವ ಮೊದಲು, “ಈ ಮಹಿಳೆಯನ್ನು ಸೈಬರ್‌ಫ್ರಾಡ್‌ಗೆ ಬಲಿಪಶು ಮಾಡಲಾಗಿದೆ, ಆದ್ದರಿಂದ ದಯವಿಟ್ಟು ಅವಳನ್ನು ನೋಡಿಕೊಳ್ಳಿ” ಎಂದು ಒಪ್ಪಿಕೊಂಡಿದ್ದಾನೆ. ಅಪರಾಧಿಗಳೊಂದಿಗೆ ಸಂಬಂಧಿಸಿದ ಎಲ್ಲಾ ಸಂಪರ್ಕ ಸಂಖ್ಯೆಗಳನ್ನು ಸ್ವಲ್ಪ ಸಮಯದ ನಂತರ ನಿಷ್ಕ್ರಿಯಗೊಳಿಸಲಾಗಿದೆ.
ನಾರಣಪುರ ಪೊಲೀಸರು ತನಿಖೆ ಆರಂಭಿಸಿದ್ದು, ಅಪರಿಚಿತ ಅಪರಾಧಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.