ಸೈಬರ್ ವಂಚಕರು ಈಗ ಬಿಬಿಎಂಪಿ ಸಿಬ್ಬಂದಿಯಂತೆ ಬಿಂಬಿಸಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರು ಪೊಲೀಸರು ಇಬ್ಬರು ಶಂಕಿತ ಸೈಬರ್ ವಂಚಕರನ್ನು ಬಂಧಿಸಿದ್ದಾರೆ. ಶಿವಪ್ರಸಾದ್ ಹಾಗೂ ಪಂಕಜ್ ಚೌಧರಿ ಬಂಧಿತ ಆರೋಪಿಗಳು.
ಬೀದರ್‌ನ 33 ವರ್ಷದ ಶಿವ ಪ್ರಸಾದ್ ಎಂಬಾತ ಬಿಬಿಎಂಪಿ ವಾರ್ಡ್ ಕಚೇರಿಯ ಸಿಬ್ಬಂದಿಯಂತೆ ಜನರಿಗೆ ದೂರವಾಣಿ ಕರೆ ಮಾಡಿ ಬೂತ್ ಲೆವೆಲ್ ಆಫೀಸರ್ (ಬಿಎಲ್‌ಒ) ಭತ್ಯೆ ಶುಲ್ಕ ಪಾವತಿಸಲು ನೆರವು ನೀಡುತ್ತೇನೆಂದು, ಅಮಾಯಕರ ಡೆಬಿಟ್ ಕಾರ್ಡ್ ವಿವರಗಳನ್ನು ತೆಗೆದುಕೊಂಡು ಒಟಿಪಿ ಕೇಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ, ಪ್ರಸಾದ್ ತನ್ನ ಸ್ನೇಹಿತ ಪಂಕಜ್ ಚೌಧರಿ ಎಂಬ ದೆಹಲಿಯ ವ್ಯಕ್ತಿ ಒದಗಿಸಿದ ಸಿಮ್ ಕಾರ್ಡ್‌ಗಳಿಂದ ಫೋನ್ ಕರೆಗಳನ್ನು ಮಾಡಿದ್ದಾನೆ. 24 ಸಿಮ್‌ಗಳನ್ನು ನೋಂದಾಯಿಸಲು ಮತ್ತು ಬ್ಯಾಂಕ್ ಖಾತೆಗಳನ್ನು ತೆರೆಯಲು ಚೌಧರಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆನಂದ್ ರಾವ್ ಸರ್ಕಲ್‌ನ ಲಾಡ್ಜ್ ಒಂದರಲ್ಲಿ ಪ್ರಸಾದ್‌ನನ್ನು ಬಂಧಿಸಲಾಗಿದ್ದು, ಚೌಧರಿಯನ್ನು ದೆಹಲಿಯಿಂದ ಕರೆತರಲಾಗಿದೆ.
ಭಾರತೀಯ ವಿದ್ಯಾರ್ಥಿಯ ಪ್ರಾಣಿ ಪ್ರೇಮ; ಯುದ್ಧದ ನಡುವೆ ಸಾಕುನಾಯಿಯನ್ನು ಬಿಟ್ಟು ಬರುವುದಿಲ್ಲ ಎಂದು ಪಟ್ಟು…!
ಈ ಇಬ್ಬರು ಖತರ್ನಾಕ್ ಸೈಬರ್ ಕಳ್ಳರು ಇತ್ತೀಚಿಗೆ, ವಿದ್ಯಾರಣ್ಯಪುರದ 52 ವರ್ಷದ ಶಾಲಾ ಶಿಕ್ಷಕಿ ಈರಮ್ಮ ಜಿ ದಾನಿಗೊಂಡ್ರಾ ಅವರನ್ನು ವಂಚಿಸಿದ್ದಾರೆ. ಜನವರಿ 27 ರಂದು ಆಕೆಗೆ ಅಪರಿಚಿತ ಸಂಖ್ಯೆಯಿಂದ ಫೋನ್ ಕರೆ ಬಂದಿತ್ತು. ಕರೆ ಮಾಡಿದವರು ತಾನು ವಿದ್ಯಾರಣ್ಯಪುರದ ಬಿಬಿಎಂಪಿ ವಾರ್ಡ್ ಕಚೇರಿಯ ಸಿಬ್ಬಂದಿ ಎಂದು ಹೇಳಿಕೊಂಡಿದ್ದು, ಬಿಎಲ್‌ಒ ಭತ್ಯೆ ಶುಲ್ಕವನ್ನು ಪಾವತಿಸಬೇಕಾಗಿದೆ ಎಂದು ಹೇಳಿ, ಸಹಾಯ ಮಾಡುವುದಾಗಿ ನಯವಾಗಿ ಮಾತನಾಡುತ್ತಾ ನಂಬಿಸಿದ್ದಾರೆ.
ಕರೆ ಮಾಡಿದ ವ್ಯಕ್ತಿ ಅವರಿಂದ ಎರಡು ಡೆಬಿಟ್ ಕಾರ್ಡ್‌ಗಳ ವಿವರಗಳನ್ನು ಪಡೆದು, ಕೆಲವು ನಿಮಿಷಗಳ ನಂತರ OTP ಅನ್ನು ಹಂಚಿಕೊಳ್ಳಲು ಕೇಳಿದ್ದಾರೆ. ಬಲೆಗೆ ಬಿದ್ದ ಅಮಾಯಕ ಶಿಕ್ಷಕಿ 17,111 ರೂ. ಕಳೆದುಕೊಂಡಿದ್ದಾರೆ.
ಬಂಧಿತ, ಪ್ರಸಾದ್ 2017 ರಿಂದ ಸೈಬರ್ ವಂಚನೆಯಲ್ಲಿ ತೊಡಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಅವನನ್ನು ಕೊನೆಯದಾಗಿ ಮೈಸೂರಿನಲ್ಲಿ ಬಂಧಿಸಲಾಯಿತು ಆದರೆ ಜನವರಿಯಲ್ಲಿ ಜಾಮೀನು ಪಡೆದ. ಬಿಡುಗಡೆಯಾದ ನಂತರವೂ ಅದೇ ಚಾಳಿಯನ್ನು ಮುಂದುವರೆಸಿರುವ ಪ್ರಸಾದ್, ಬೆಂಗಳೂರಿನಲ್ಲಿ ಆರು ಮತ್ತು ರಾಯಚೂರಿನಲ್ಲಿ ಎರಡು ಸೈಬರ್ ಅಪರಾಧಗಳನ್ನು ಎಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರತಿ ಸೈಬರ್ ಅಪರಾಧದ ನಂತರ, ಅವನು ಆನ್‌ಲೈನ್‌ನಲ್ಲಿ ಮೊಬೈಲ್ ಫೋನ್‌ಗಳನ್ನು ಖರೀದಿಸಿದ್ದಾನೆ. ನಂತರ ಅವುಗಳನ್ನು ಮತ್ತೊಂದು ಪೋರ್ಟಲ್‌ನಲ್ಲಿ ಮಾರಾಟ ಮಾಡಿದ್ದಾನೆ. ಇವರಿಬ್ಬರು ದಾವಣಗೆರೆ, ಶಿವಮೊಗ್ಗ ಹಾಗೂ ಅಸ್ಸಾಂ ಮತ್ತು ಮಹಾರಾಷ್ಟ್ರದ ಜನರಿಗೆ ವಂಚಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.