ಕೋಲಾರ: ಮೊಬೈಲ್ ಗೆ ಬರುವ ಲಿಂಕ್, ಅನಾಮಧೇಯ ವ್ಯಕ್ತಿಗಳ ಕರೆಗೆ ಉತ್ತರಿಸುವ ಮೊದಲು ಎಚ್ಚರವಹಿಸುವುದು ಅಗತ್ಯ. ಇಲ್ಲೋರ್ವ ವ್ಯಕ್ತಿ ತಮ್ಮ ಮೊಬೈಲ್ ಗೆ ಬಂದ ಲಿಂಕ್ ಒತ್ತಿ 15 ಲಕ್ಷ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರದ ಕೆಜಿಎಫ್ ನ ಸುಭಾಷ್ ನಗರದ ಮುರುಗನ್, ತಮ್ಮ ಮೊಬೈಲ್ ಗೆ ಬಂದ ಲಿಂಕ್ ಒತ್ತಿ ಬರೋಬ್ಬರು 15, 27,400 ರೂಪಾಯಿ ಕಳೆದುಕೊಂಡಿದ್ದಾರೆ.
ಮೊದಲಿಗೆ ಮುರುಗನ್ ಅವರಿಗೆ ವ್ಯಕ್ತಿಯೊಬ್ಬ ಕರೆ ಮಾಡಿ ತಾನು ಟಿಜೆಸಿ ಕಾರ್ಪೊರೇಟ್ ಕಂಪನಿಯ ರೀಜನಲ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮಗೆ ತಿಂಗಳಿಗೆ 50 ಸಾವಿರ ರೂಪಾಯಿ ಹಣ ಬರುವಂತೆ ಮಾಡುತ್ತೇನೆ. ತಾನು ಕಳುಹಿಸಿದ ಈ ಫೋನ್ ಪೇ ಲಿಂಕ್ ಒತ್ತಿ ಎಂದು ಹೇಳಿ ಲಿಂಕ್ ಮೆಸೇಜ್ ಮಾಡಿದ್ದಾನೆ. ಮುರುಗನ್ ಬೇರೆ ಯೋಚನೆ ಮಾಡದೇ ಲಿಂಕ್ ಒತ್ತಿದ್ದಾರೆ. ತಕ್ಷಣ ಅವರ ಖಾತೆಯಲ್ಲಿದ್ದ 15, 27,400 ರೂಪಾಯಿ ಡ್ರಾ ಆಗಿದೆ. ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.
ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆ ಮುರುಗನ್ ಕೆಜಿಎಫ್ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗಾಗಿ ತನಿಖೆ ನಡೆಸಿದ್ದಾರೆ.