ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸೈಬರ್ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಐಟಿ ಉದ್ಯೋಗಿಯೊಬ್ಬರಿಂದ ಬರೋಬ್ಬರಿ 3.7 ಕೋಟಿ ಹಣ ದೋಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಸಿ ಇನ್ಫೋಸಿಸ್ ಕಾರ್ಯನಿರ್ವಾಹಕರೊಬ್ಬರಿಂದ 3.7 ಕೋಟಿ ಹಣ ಸುಲಿಗೆ ಮಾಡಿದ್ದಾರೆ ಸೈಬರ್ ದಂಧೆ ಕೋರರು.
ಸಿಬಿಐ ಹಾಗೂ ಮುಂಬೈ ಪೊಲೀಸರ ಹೆಸರಲ್ಲಿ ಕರೆ ಮಾಡಿರುವ ವಂಚಕರು ಅಕ್ರಮ ಹಣ ವರ್ಗಾವಣೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಬಂಧಿಸುವುದಾಗಿ ಹೆದರಿಸಿದ್ದಾರೆ. 3.7 ಕೋಟಿ ಹಣ ನೀಡಿದರೆ ಪ್ರಕರಣವನ್ನು ರದ್ದು ಮಾಡುವುದಾಗಿ ಹೇಳಿದ್ದಾರೆ. ಅಲ್ಲದೇ ಲೆಕ್ಕ ಪರಿಶೋಧನೆ ಬಳಿಕ ನಿಮ್ಮ ಹಣವನ್ನು ಬ್ಯಾಂಕ್ ಖಾತೆಗೆ ವಾಪಾಸ್ ಹಾಕಲಾಗುವುದು ಎಂದು ನಂಬಿಸಿದ್ದಾರೆ. ಅದರಂತೆ ಐಟಿ ಉದ್ಯೋಗಿ ಹಣ ವರ್ಗಾಯಿಸಿದ್ದಾರೆ. ಅಲ್ಲದೇ ಬ್ಯಾಂಕ್ ಖಾತೆಯ ಸಂಖ್ಯೆಯನ್ನೂ ನೀಡಿದ್ದರಂತೆ. ಖಾತೆಯಿಂದ ಹಣ ಡ್ರಾ ಆಗುತ್ತಿದ್ದಂತೆ ವಂಚನೆ ಬಗ್ಗೆ ಅನುಮಾನಗೊಂಡು ವೈಟ್ ಫೀಲ್ಡ್ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದ್ದು, ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಬ್ಯಾಂಕ್ ಅಧಿಕರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.