ಬೆಂಗಳೂರು : CWRC, CWMA, ಸುಪ್ರೀಂ ಕೋರ್ಟ್ ಮುಂದೆ ವಾಸ್ತವಾಂಶ ಇಟ್ಟರೂ ನಮಗೆ ನ್ಯಾಯ ಸಿಗ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬೇಸರ ಹೊರ ಹಾಕಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ಅ.15ವರೆಗೆ ಪ್ರತಿದಿನ 3000 ಕ್ಯೂಸೆಕ್ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ ಬೆನ್ನಲ್ಲೇ ರೈತರ ಪ್ರತಿಭಟನೆಗಳ ಪ್ರತಿಭಟನೆ ಮತ್ತೆ ತೀವ್ರ ಸ್ವರೂಪ ಪಡೆದಿದೆ.
ನಾವು ನಮ್ಮ ಎಲ್ಲ ವಾಸ್ತವ ಅಂಶಗಳನ್ನ CWRC, CWMA ಹಾಗೂ ಸುಪ್ರೀಂ ಕೋರ್ಟ್ ಮುಂದಿಟ್ಟಿದ್ದೇವೆ. ಆದರೂ ನಮಗೆ ನ್ಯಾಯ ಸಿಗುತ್ತಿಲ್ಲ. ಲೀಗಲ್ ಟೀಮ್, ತಜ್ಞರ ಜೊತೆ ಸಭೆ ಬಳಿಕ ಒಂದು ತೀರ್ಮಾನ ಮಾಡುತ್ತೇವೆ, ಇಂದಿನ ಸಭೆಯ ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
‘CWMA’ ಆದೇಶದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕಾನೂನು ತಜ್ಞರ ಮೊರೆ ಹೋಗಿದ್ದು, ಗೃಹ ಕಚೇರಿ ಕೃಷ್ಣಾದಲ್ಲಿ ಕಾನೂನು ತಜ್ಞರ ಜೊತೆ ಸಿಎಂ ಸಭೆ ನಡೆಸುತ್ತಿದ್ದಾರೆ. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ನಿವೃತ್ತ ನ್ಯಾಯಮೂರ್ತಿಗಳಾದ ಹೆಚ್.ಎಲ್.ದತ್ತು, ಗೋಪಾಲಗೌಡ, ರವೀಂದ್ರಬಾಬು, ರಾಜೇಂದ್ರಬಾಬು, ಎಂ.ಎನ್.ವೆಂಕಟಾಚಲಯ್ಯ ಜೊತೆ ಸಭೆ ನಡೆಸುತ್ತಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಹೊರ ಬೀಳುತ್ತಿದ್ದಂತೆ ರಾಜ್ಯದಲ್ಲಿ ಪ್ರತಿಭಟನೆಗಳು ಮತ್ತಷ್ಟು ಜೋರಾಗಿದೆ.