ನವದೆಹಲಿ: ದೆಹಲಿಯಲ್ಲಿ ನಾಳೆ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ನಾಳೆ ಬೆಳಗ್ಗೆ ದೆಹಲಿಯ ಅಶೋಕ ಹೋಟೆಲ್ ನಲ್ಲಿ ಸಭೆ ನಡೆಯಲಿದ್ದು, ಸಭೆಯ ನಂತರ ಒಂದು ಗಂಟೆಗೆ ನಾಯಕರು ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಕಾರ್ಯಕಾರಿ ಸಭೆಯಲ್ಲಿ ವಿಪಕ್ಷ ನಾಯಕನ ಆಯ್ಕೆ ಸೇರಿ ಹಲವು ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, 99 ಸ್ಥಾನ ಗೆದ್ದಿದೆ. 10 ವರ್ಷಗಳ ನಂತರ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ಪಡೆಯುತ್ತಿದೆ.
ನಾಳೆ ಸಂಜೆ 7 ಗಂಟೆಗೆ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆ ನಡೆಯಲಿದೆ. ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಸಭೆ ನಡೆಸಲಾಗುವುದು. ಸಂಸದೀಯ ಪಕ್ಷದ ಸಭೆಯ ನಂತರ ಕಾಂಗ್ರೆಸ್ ನಾಯಕರಿಗೆ ಔತಣಕೂಟ ಏರ್ಪಡಿಸಲಾಗಿದೆ.