ಮನುಕುಲದ ಅತ್ಯಂತ ಸುಭದ್ರ ನಿವಾಸವಾದ ಶ್ವೇತ ಭವನದ ಭದ್ರತೆಯನ್ನು ಭೇದಿಸಿದ ಪುಟಾಣಿ ಪೋರನೊಬ್ಬನನ್ನು ಅಮೆರಿಕದ ಸೀಕ್ರೆಟ್ ಸರ್ವೀಸ್ ಅಧಿಕಾರಿಗಳು ಪತ್ತೆ ಮಾಡುವಲ್ಲಿ ಸಫಲರಾಗಿದ್ದಾರೆ.
ಶ್ವೇತಭವನದ ಲಾನ್‌ನ ಉತ್ತರದ ದಿಕ್ಕಿನಿಂದ ಈ ಪೋರ ಒಳ ಪ್ರವೇಶಿಸಿದ್ದಾನೆ. ಅಧ್ಯಕ್ಷ ಜೋ ಬಿಡೆನ್ ಶ್ವೇತ ಭವನದ ಒಳಗಿದ್ದ ವೇಳೆ ಈ ಘಟನೆ ಜರುಗಿದೆ.
ಪೆನ್ಸಿಲ್ವೇನಿಯಾ ಅವೆನ್ಯೂನಲ್ಲಿ ಈ ಪೋರನನ್ನು ಆತನ ಹೆತ್ತವರಿಗೆ ಒಪ್ಪಿಸಲಾಗಿದೆ. ಇಬ್ಬರನ್ನೂ ಪ್ರಶ್ನಿಸಿದ ಪೊಲೀಸರು, ಅವರ ಮಗುವಿನೊಂದಿಗೆ ಮನೆಗೆ ಹೋಗಲು ಬಿಟ್ಟು ಕಳುಹಿಸಿದ್ದಾರೆ.
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಶ್ವೇತಭವನದ ಸುರಕ್ಷತಾ ಫೆನ್ಸಿಂಗ್‌ಅನ್ನು ದಾಟಿದ ಅನಧಿಕೃತ ವ್ಯಕ್ತಿಗಳು, ಅಧ್ಯಕ್ಷರ ಅರಮನೆಯ ಅಂಗಳಕ್ಕೆ ಪ್ರವೇಶ ಗಿಟ್ಟಿಸಿರುವ ಅನೇಕ ಘಟನೆಗಳು ಜರುಗಿವೆ. 2014ರಲ್ಲಿ ವ್ಯಕ್ತಿಯೊಬ್ಬ ಫೆನ್ಸಿಂಗ್ ಅನ್ನು ದಾಟಿ ಶ್ವೇತಭವನದೊಳಗೇ ಪ್ರವೇಶಿಸಲಿದ್ದ ವೇಳೆ ಭದ್ರತಾ ಸಿಬ್ಬಂದಿಯ ಹಿಡಿತಕ್ಕೆ ಸಿಕ್ಕಿಬಿದ್ದಿದ್ದ.