ದುಬೈನಿಂದ ಆಗಮಿಸಿದ್ದ ವ್ಯಕ್ತಿಯೊಬ್ಬರು ಚಿನ್ನ ಅಡಗಿಸಿಟ್ಟಿರಬಹುದು ಎಂದು ಭಾವಿಸಿದ ಕಸ್ಟಮ್ಸ್ ಅಧಿಕಾರಿಗಳು 48 ಲಕ್ಷ ರೂಪಾಯಿ ಮೌಲ್ಯದ ವಾಚ್ ಒಡೆದು ಹಾಕಿದ ವಿಚಾರ ಕೋರ್ಟ್ ಮೆಟ್ಟಿಲೇರಿದೆ.
ಕಸ್ಟಮ್ಸ್ ಅಧಿಕಾರಿಗಳು 48 ಲಕ್ಷ ರೂಪಾಯಿ ಮೌಲ್ಯದ ವಾಚ್ ಒಡೆದು ಹಾಕಿದ್ದು, ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಕಾರಗದ್ದೆ ನಿವಾಸಿ ಮೊಹಮ್ಮದ್ ಇಸ್ಮಾಯಿಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಮೊಹಮ್ಮದ್ ಇಸ್ಮಾಯಿಲ್ ದುಬೈನಲ್ಲಿ ರಫ್ತು ವ್ಯವಹಾರ ನಡೆಸುತ್ತಿದ್ದು, ಮಾರ್ಚ್ 3 ರಂದು ಕೇರಳದ ಕಲ್ಲಿಕೋಟೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಕಸ್ಟಮ್ಸ್ ಅಧಿಕಾರಿಗಳು ಅವರನ್ನು ತಪಾಸಣೆಗೆ ಒಳಪಡಿಸಿ ಮೊಹಮ್ಮದ್ ಇಸ್ಮಾಯಿಲ್ ಧರಿಸಿದ್ದ 48 ಲಕ್ಷ ರೂಪಾಯಿ ಮೌಲ್ಯದ ಆಡಿಮಾವರ್ಸ್ ಪಿಗುಯೆಟ್ ಕಂಪನಿಯ ವಾಚ್ ವಶಪಡಿಸಿಕೊಂಡು ಅದರಲ್ಲಿ ಚಿನ್ನ ಅಡಗಿಸಿಟ್ಟಿರಬಹುದು ಎಂದು ಒಡೆದು ಹಾಕಿದ್ದಾರೆ.
ಅಂದ ಹಾಗೆ ಕಸ್ಟಮ್ಸ್ ಅಧಿಕಾರಿಗಳಿಗೆ ವಾಚಿನ ಬೆಲೆ ಗೊತ್ತಿರಲಿಲ್ಲ. ವಾಚ್ ಒಡೆದು ಹಾಕಿದ ಅವರಿಗೆ ಅದರಲ್ಲಿ ಚಿನ್ನ ಇಲ್ಲವೆಂಬುದು ಖಚಿತವಾಗಿ ವಾಪಸ್ ಕೊಟ್ಟಿದ್ದಾರೆ. ತಮ್ಮ ವಾಚ್ ಬಿಡಿಬಿಡಿಯಾಗಿದ್ದನ್ನು ಗಮನಿಸಿದ ಮೊಹಮ್ಮದ್ ಇಸ್ಮಾಯಿಲ್ ಮೊದಲು ವಾಚ್ ಹೇಗಿತ್ತೋ ಅದೇ ರೀತಿ ಕೊಡಬೇಕೆಂದು ಪಟ್ಟುಹಿಡಿದಿದ್ದಾರೆ. ವಾಚ್ ಬೆಲೆ ಕೇಳಿದ ಕಸ್ಟಮ್ಸ್ ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ. ಕೊನೆಗೆ ಮೊಹಮ್ಮದ್ ಇಸ್ಮಾಯಿಲ್ ಮಾರ್ಚ್ 4 ರಂದು ಕಲ್ಲಿಕೋಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಮಾರ್ಚ್ 8 ರಂದು ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ ಎಂದು ಹೇಳಲಾಗಿದೆ.