ಬೆಂಗಳೂರು: ಬೀನ್ಸ್ ಬೆಲೆ ಕೇಳಿ ಗ್ರಾಹಕರು ಬೆಚ್ಚಿ ಬೀಳುವ ಪರಿಸ್ಥಿತಿ ಎದುರಾಗಿದೆ. ಒಂದು ಕೆಜಿ ಬೀನ್ಸ್ ದರ 200 ರಿಂದ 320 ರೂ.ವರೆಗೆ ಮಾರಾಟವಾಗಿದೆ.
ಬೆಂಗಳೂರಿನ ಕೆಂಗೇರಿ, ಹೆಬ್ಬಾಳ ಮೊದಲಾದ ಬಡಾವಣೆಗಳಲ್ಲಿ ಕೆಜಿಗೆ 200 ರೂಪಾಯಿ ಇದ್ದರೆ, ಜಯನಗರ ಮೊದಲಾದ ಬಡಾವಣೆಗಳಲ್ಲಿ ಕೆಜಿಗೆ 320 ರೂಪಾಯಿ ಇದೆ. ಬೀನ್ಸ್ ದರ ಹೆಚ್ಚೆಂದರೆ 80 ರಿಂದ 100 ರೂಪಾಯಿವರೆಗೆ ಇರುತ್ತಿತ್ತು. ಈಗ 300ರ ಗಡಿ ದಾಟಿರುವುದು ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.
ಅಧಿಕ ತಾಪಮಾನ, ಬರಗಾಲ, ನೀರಿನ ಸಮಸ್ಯೆ ಮೊದಲಾದ ಕಾರಣಗಳಿಂದ ತರಕಾರಿ ಬೆಳೆ ಒಣಗಿವೆ. ಕೆಲವು ಕಡೆ ಮಳೆಯಾಗಿದ್ದು, ಹೂವು ಉದುರಿದ್ದರಿಂದ ಬೀನ್ಸ್ ಉತ್ಪಾದನೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಅಲ್ಲದೆ, ಮದುವೆ, ಜಾತ್ರೆ, ಗೃಹಪ್ರವೇಶ, ಹಬ್ಬ, ಶುಭ ಸಮಾರಂಭಗಳ ಕಾರಣ ಬೀನ್ಸ್ ಗೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆಗೆ ತಕ್ಕಂತೆ ಬೀನ್ಸ್ ಪೂರೈಕೆಯಾಗದ ಹಿನ್ನೆಲೆಯಲ್ಲಿ 300 ರೂ. ಗಡಿ ದಾಟಿದೆ.
ಟೊಮೆಟೊ ದರ ಕೂಡ 45 ರಿಂದ 50 ರೂಪಾಯಿಗೆ ತಲುಪಿದೆ. ನಾಟಿ ಕೊತಂಬರಿಸೊಪ್ಪು ಒಂದು ಕಂತೆಗೆ 50 ರಿಂದ 60 ರೂಪಾಯಿವರೆಗೂ ಇದೆ. ಹೀಗೆ ತರಕಾರಿ, ಸೊಪ್ಪು ದರ ಏರಿಕೆಯಾಗುತ್ತಿರುವುದು ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ.