ದಾವಣಗೆರೆ: ದಾವಣಗೆರೆ ನಗರದ ಮಂಡಿಪೇಟೆಯ ಸ್ಟೇಟ್ ಬ್ಯಾಂಕ್ ಇಂಡಿಯಾ ಬ್ಯಾಂಕಿನಿಂದ ಗೃಹಸಾಲ ಪಡೆದಿದ್ದು ನಿಯಮಬಾಹಿರವಾಗಿ ಸಾಲದ ಭದ್ರತೆಗಾಗಿ ವಿಮಾ ಪಾಲಿಸಿ ನೀಡಬೇಕೆಂಬ ಅನುಚಿತ ವ್ಯಾಪಾರ ಪದ್ದತಿಯ ವಿರುದ್ದವಾಗಿ ತೀರ್ಪು ನೀಡಿ ನೊಂದ ಗ್ರಾಹಕರಿಗೆ ಒಟ್ಟು 88,344 ರೂ.ಗಳನ್ನು ಶಾಖಾಧಿಕಾರಿ ವೇತನದಿಂದ ಪರಿಹಾರ ನೀಡಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ ಆದೇಶಿಸಿದ್ದಾರೆ.
ನಗರದ ಮಂಡಿಪೇಟೆ ಎಸ್‍ಬಿಐ ಶಾಖೆಯಲ್ಲಿ ನ್ಯಾಯಾಂಗ ಇಲಾಖೆ ನೌಕರ ಚಂದ್ರಶೇಖರ ಇವರು 2023 ರ ಜುಲೈ 3 ರಂದು ಗೃಹ ನಿರ್ಮಾಣಕ್ಕಾಗಿ 45,00,000 ರೂ.ಗಳ ಗೃಹಸಾಲ ಪಡೆದಿದ್ದರು. 7 ತಿಂಗಳ ನಂತರ ಇವರ ಬ್ಯಾಂಕ್ ಖಾತೆಯಿಂದ 28,344 ರೂ.-ಗಳ ಹಣ ವರ್ಗಾಯಿಸಿರುವುದು ಕಂಡು ಬಂದಿರುತ್ತದೆ. ಬ್ಯಾಂಕ್‍ಗೆ ಭೇಟಿ ನೀಡಿ ವಿಚಾರಿಸಲಾಗಿ ಈಗಾಗಲೇ ಗೃಹಸಾಲ ಪಡೆಯುವಾಗ 4,61,279 ರೂ.ಗಳ ವಿಮಾ ಪಾಲಿಸಿಯನ್ನು ಭದ್ರತೆಗಾಗಿ ನೀಡಿದ್ದು ಈಗ ಹೆಚ್ಚಿನ ವಿಮಾ ಪಾಲಿಸಿ ಏಕೆ ಎಂದು ಪ್ರಶ್ನಿಸಿರುತ್ತಾರೆ. ನೀವು ಒಂದು ಕೋರಿಕೆ ಪತ್ರ ನೀಡಿ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆಂದು ಸಮಾಜಾಯಿಸಿ ನೀಡಿ ಕಳುಹಿಸಿದ್ದರು.
ಅವರು ಕ್ರಮ ತೆಗೆದುಕೊಳ್ಳದಿರುವುದರಿಂದ ಮತ್ತೆ 2023 ರ ಆಗಸ್ಟ್ 16 ರಂದು ಬ್ಯಾಂಕಿನ ಅಧಿಕಾರಿಗಳನ್ನು ಭೇಟಿಯಾಗಿ ವಿಚಾರಿಸಿದರು. ಈ ವೇಳೆ ಶಾಖೆಯ ಮುಖ್ಯ ವ್ಯವಸ್ಥಾಪಕರು ಗ್ರಾಹಕರ ಕೋರಿಕೆಯನ್ನು ತಿರಸ್ಕರಿಸಿ, ಬ್ಯಾಂಕಿನ ನಿಯಮದಂತೆ ಮತ್ತು ಆಡಿಟ್‍ಗೆ ಸಂಬಂಧಪಟ್ಟಂತೆ ಹೆಚ್ಚುವರಿಯಾಗಿ ನೀಡಿದ ಗೃಹರಕ್ಷಕ ಪಾಲಸಿಯನ್ನು ರದ್ದುಗೊಳಿಸಲು ಬರುವುದಿಲ್ಲವೆಂದು ಹಿಂಬರಹ ನೀಡಿ ಕಳುಹಿಸಿದ್ದರು.
ಗೃಹಸಾಲ ಪಡೆದ ಚಂದ್ರಶೇಖರ್ ಅವರು ದಾವಣಗೆರೆ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಈ ಬಗ್ಗೆ ದೂರು ಸಲ್ಲಿಸಿದ್ದರು. ಗ್ರಾಹಕರ ನ್ಯಾಯಾಲಯವು ತೀರ್ಪಿನಲ್ಲಿ ಈ ನಡಾವಳಿಕೆಯು ಗ್ರಾಹಕರ ಹಕ್ಕುಗಳ ವಿರುದ್ದವಾದ ಚಟುವಟಿಕೆಯಾಗಿದ್ದು ಗೃಹಸಾಲ ನೀಡುವಾಗ ಭದ್ರತೆಗಾಗಿ ಯಾವುದೇ ರೀತಿಯ ಪಾಲಿಸಿಗಳನ್ನು ನೀಡಲೇಬೇಕೆಂಬ ಯಾವುದೇ ಪ್ರಾಧಿಕಾರದ ನಿರ್ದೇಶನವಿಲ್ಲದೇ ಮತ್ತು ಸರ್ಕಾರದ ಆದೇಶವಿಲ್ಲದದಿದ್ದರೂ ಸಾರ್ವಜನಿಕ ಬ್ಯಾಂಕ್‍ಗಳು ಇಂತಹ ಅನುಚಿತ ವ್ಯಾಪಾರ ಪದ್ದತಿಗಳನ್ನು ಅನುಸರಿಸುತ್ತಿರುವುದು ಗ್ರಾಹಕರ ಹಿತರಕ್ಷಣೆಗೆ ಮಾರಕವಾಗಿದೆ ಎಂದು ಅಭಿಪ್ರಾಯಿಸಿ ಬ್ಯಾಂಕ್‍ನವರು ಕೈಗೊಂಡ ಕ್ರಮ ಅಸಿಂಧುವೆಂದು ಪರಿಗಣಿಸಿ ಕಡಿತ ಮಾಡಿದ 28344 ರೂ.ಗಳನ್ನು ವಾಪಸ್ ಸಾಲದ ಖಾತೆಗೆ ಜಮಾ ಮಾಡಲು ಮತ್ತು ಮಾನಸಿಕ ವ್ಯಥೆಗೆ ಪರಿಹಾರವಾಗಿ 50000 ರೂ.ಗಳನ್ನು, ದೂರು ವೆಚ್ಚವಾಗಿ 10000 ರೂ. ಗಳು ಸೇರಿ ಒಟ್ಟು 88,344 ರೂ. ಗಳನ್ನು ಸಂಬಂಧಪಟ್ಟ ಹಿರಿಯ ಶಾಖಾಧಿಕಾರಿಗಳ ಸಂಬಳದಿಂದ ಕಡಿತ ಮಾಡಿ ಪಾವತಿ ಮಾಡಲು ಆದೇಶಿಸಲಾಗಿದೆ.
ತೀರ್ಪು ವೇಳೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ತ್ಯಾಗರಾಜನ್, ಮಹಿಳಾ ಸದಸ್ಯರಾದ ಗೀತಾ ಉಪಸ್ಥಿತರಿದ್ದರು.