ಜೈಪುರ: ಹಿಂದೂ ಹೊಸ ವರ್ಷವನ್ನು ಆಚರಿಸಲು ಹೊರಟಿದ್ದ ಮೋಟಾರ್ ಸೈಕಲ್ ರ್ಯಾಲಿಯ ಮೇಲೆ ಕಲ್ಲು ತೂರಾಟ ನಡೆದ ನಂತರ ಶನಿವಾರ ಸಂಜೆ ರಾಜಸ್ಥಾನದ ಕರೌಲಿಯಲ್ಲಿ ಕೋಮು ಘರ್ಷಣೆಗಳು ನಡೆದಿದ್ದು, ಕರ್ಫ್ಯೂ ವಿಧಿಸಲಾಗಿದೆ. ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದ್ದು, ಭಾರೀ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಹಿಂಸಾಚಾರದಲ್ಲಿ ಸುಮಾರು ಎರಡು ಡಜನ್ ಜನರು ಗಾಯಗೊಂಡಿದ್ದಾರೆ. 30 ಜನರನ್ನು ಬಂಧಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಕಾನೂನು ಮತ್ತು ಸುವ್ಯವಸ್ಥೆ) ಹವಾ ಸಿಂಗ್ ಘುಮಾರಿಯಾ ಅವರು ಹೇಳಿದರು.
ನವ ಸಂವತ್ಸರವನ್ನು ಗುರುತಿಸುವ ರ್ಯಾಲಿಯು ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶದಲ್ಲಿ ಹಾದು ಹೋಗುತ್ತಿದ್ದಾಗ ಕೆಲವರು ಕಲ್ಲು ತೂರಾಟ ನಡೆಸಿದರು. ನಂತರ ಹಿಂಸಾಚಾರ ಉಲ್ಬಣಗೊಂಡಿತು. ಕೆಲವು ಅಂಗಡಿಗಳು ಮತ್ತು ಬೈಕ್ ಸುಟ್ಟು ಹಾಕಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಕರೌಲಿಯ ಪೊಲೀಸ್ ನಿಯಂತ್ರಣ ಕೊಠಡಿಯಿಂದ ಮಾಹಿತಿ ನೀಡಿದ್ದು, ಗಾಯಗೊಂಡವರಲ್ಲಿ ಹಲವರನ್ನು ಪ್ರಾಥಮಿಕ ಚಿಕಿತ್ಸೆಯ ನಂತರ ಬಿಡುಗಡೆ ಮಾಡಲಾಗಿದೆ. ಮತ್ತು ಸುಮಾರು 10 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬರನ್ನು ಜೈಪುರದ ಎಸ್‌ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದೆ.
ರಾಜ್ಯ ರಾಜಧಾನಿ ಜೈಪುರದಿಂದ 170 ಕಿಮೀ ದೂರದಲ್ಲಿರುವ ಕರೌಲಿಯಲ್ಲಿ ಮೊಬೈಲ್ ಇಂಟರ್ನೆಟ್ ಅನ್ನು ಸಹ ಸ್ಥಗಿತಗೊಳಿಸಲಾಗಿದೆ.
ರಾಜ್ಯಪಾಲ ಕಲ್ರಾಜ್ ಮಿಶ್ರಾ ಮತ್ತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎಂಎಲ್ ಲಾಥರ್ ಅವರೊಂದಿಗೆ ಮಾತನಾಡಿದ್ದಾರೆ. ಶಾಂತಿ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.