ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೆಯ ಅಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿಯಿಂದ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಬೆಂಗಳೂರು, ಮೈಸೂರು ಸೇರಿ 8 ನಗರಗಳಲ್ಲಿ ಕೊರೋನಾಗೆ ಕಡಿವಾಣ ಹಾಕಲು ನಿರ್ಬಂಧ ಹೇರಲಾಗಿದೆ.
ವೈದ್ಯ ಸೇವೆ, ತುರ್ತು ಚಟುವಟಿಕೆಗಳಿಗೆ ಮಾತ್ರ ಅವಕಾಶ ಇರುತ್ತದೆ. ಜೊತೆಗೆ ಬಸ್, ರೈಲು, ವಿಮಾನ ಪ್ರಯಾಣ, ಕ್ಯಾಬ್ ಗಳು, ಹೂವು, ಹಣ್ಣು, ತರಕಾರಿ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳು ಸಂಚರಿಸಲಿವೆ. ಇ-ಕಾಮರ್ಸ್ ವಾಹನಗಳು, ಫುಡ್ ಹೋಮ್ ಡೆಲಿವರಿಗೆ ಅನುಮತಿ ನೀಡಲಾಗಿದೆ.
ರಾತ್ರಿ ಪಾಳಿ ಕೆಲಸ ನಿರ್ವಹಿಸುವವರು ರಾತ್ರಿ 10 ಗಂಟೆಯ ಒಳಗೆ ಕಚೇರಿ ತಲುಪಬೇಕು. ಬೆಳಗ್ಗೆ 5 ಗಂಟೆಯ ನಂತರ ಹೊರಗೆ ಬರಬೇಕು. ಆಸ್ಪತ್ರೆಗೆ ಹೋಗುವವರು, ರೋಗಿಗಳ ಆರೈಕೆಗೆ ತೆರಳುವವರು ಸೂಕ್ತ ದಾಖಲೆ ತೋರಿಸಬೇಕು.
ಕಂಪನಿ, ಕಾರ್ಖಾನೆಗಳ ನೌಕರರು 10 ಗಂಟೆಯೊಳಗೆ ಮನೆ ಸೇರಬೇಕು. ಹೋಟೆಲ್, ರೆಸ್ಟೋರೆಂಟ್ ಗ್ರಾಹಕರು 10 ಗಂಟೆಯೊಳಗೆ ಮನೆ ಸೇರಿಕೊಳ್ಳಬೇಕು. ನೈಟ್ ಕರ್ಫ್ಯೂ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ಪಾಸ್ ವಿತರಣೆ ಮಾಡುವುದಿಲ್ಲ. ತುರ್ತು ಕಾರ್ಯಗಳಿಗಾಗಿ ಓಡಾಡುವವರು ಗುರುತಿನ ಚೀಟಿ ತೋರಿಸಬೇಕಿದೆ.
ವೈದ್ಯಕೀಯ ಸೇವೆ ಮತ್ತು ತುರ್ತು ಚಟುವಟಿಕೆಗೆ ಮಾತ್ರ ಅನುಮತಿ ನೀಡಲಾಗಿದ್ದು, ಉಳಿದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು.