ಫುಟ್ಬಾಲ್ ದಂತಕಥೆ ದಿವಂಗತ ಡಿಯಾಗೋ ಮರಡೋನಾ ಯಾವಾಗಲೂ ವಿವಾದಗಳಿಂದಲೇ ಸುದ್ದಿ ಮಾಡಿದ್ದೇ ಹೆಚ್ಚು. ಫುಟ್ಬಾಲ್ ಅಂಗಳದಲ್ಲಿ ಹೆಸರು ಮಾಡಿದ್ದರ ಜೊತೆಜೊತೆಗೆ ವಿವಾದಗಳ ಮೂಲಕವೇ ಮರಡೋನಾ ಪರಿಚಿತರಾಗಿದ್ದರು.
ಮರಡೋನಾ ಜೊತೆಗೆ ಸಂಬಂಧದಲ್ಲಿದ್ದ ಕ್ಯೂಬಾದ ಮಾವಿಸ್ ಅಲ್ವಾರೆಜ಼್ ಹೆಸರಿನ ಮಹಿಳೆಯೊಬ್ಬರು, ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ ತಾನು ಹದಿಹರೆಯದವಳಾಗಿದ್ದ ವೇಳೆ ತನ್ನ ಮೇಲೆ ಅತ್ಯಾಚಾರವೆಸಗಿ ’ತನ್ನ ನೆಮ್ಮದಿ’ಯನ್ನು ಕಸಿದಿದ್ದಾಗಿ ಆಪಾದನೆ ಮಾಡಿದ್ದಾರೆ.
37 ವರ್ಷ ವಯಸ್ಸಿನ ಅಲ್ವರೆಜ಼್ ತಾವು ಮಾಡಿದ ಆಪಾದನೆ ಸಂಬಂಧ ಅರ್ಜೆಂಟೀನಾದ ನ್ಯಾಯಾಂಗ ಸಚಿವಾಲಯಕ್ಕೆ ದೂರು ನೀಡಿದ್ದಾರೆ. ಅಲ್ವರೆಜ಼್ 16 ವರ್ಷದಾಕೆ ಆಗಿದ್ದ ವೇಳೆ ಆಕೆಯ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರದ ವಿಚಾರವಾಗಿ ಇದೀಗ ದೂರು ದಾಖಲಾಗಿದೆ.
2001ರಲ್ಲಿ ಮರಡೋನಾ ಜೊತೆಗೆ ಅಲ್ವರೆಜ಼್ ಅರ್ಜೆಂಟಿನಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆ ವೇಳೆ ಮರಡೋನಾಗೆ 40 ವರ್ಷ ವಯಸ್ಸಾಗಿದ್ದರೆ, ಅಲ್ವರೆಜ಼್ಗೆ 16 ವರ್ಷ ವಯಸ್ಸು. ಈ ಟ್ರಿಪ್ಗೂ ಮುನ್ನ ಮರಡೋನಾ ಮಾದಕ ದ್ರವ್ಯ ವ್ಯಸನದಿಂದ ಮುಕ್ತರಾಗಲು ಕ್ಯೂಬಾಗೆ ಬಂದಿದ್ದ ವೇಳೆ ಆತನನ್ನು ಮೊದಲ ಬಾರಿಗೆ ಭೇಟಿಯಾಗಿದ್ದಾಗಿ ಅಲ್ವರೆಜ಼್ ತಿಳಿಸಿದ್ದಾರೆ.
ಬ್ಯೂನಸ್ ಐರಿಸ್ ನಲ್ಲಿ ಮಧ್ಯಮಗಳೊಂದಿಗೆ ಮಾತನಾಡಿದ ಅಲ್ವರೆಜ಼್, ಹವಾನಾದ ಕ್ಲಿನಿಕ್ ಒಂದರಲ್ಲಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾಗಿ ತಿಳಿಸಿದ್ದಾರೆ. ಇದೇ ವೇಳೆ ತನ್ನ ತಾಯಿ ಪಕ್ಕದ ಕೋಣೆಯಲ್ಲೇ ಇದ್ದಿದ್ದಾಗಿ ಅಲ್ವರೆಜ಼್ ಹೇಳಿದ್ದಾರೆ.
“ನನ್ನ ಬಾಯಿ ಮುಚ್ಚಿದ್ದ ಆತ ಅತ್ಯಾಚಾತ ಮಾಡಿದ್ದಾನೆ. ಅದರ ಬಗ್ಗೆ ನನಗೆ ಹೆಚ್ಚು ಚಿಂತಿಸಲು ಇಷ್ಟವಿಲ್ಲ. ಅಲ್ಲಿಂದ ಆಚೆಗೆ ನನ್ನ ಮುಗ್ಧತೆಯನ್ನೆಲ್ಲಾ ಆತ ಕಸಿದುಬಿಟ್ಟ. ಆ ವಯಸ್ಸಿನ ಹುಡುಗಿಗೆ ಇರಬೇಕಾದ ಮುಗ್ಧತೆಯ ಹೊರಗೆ ಬಂದು ಬದುಕುವುದು ಬಹಳ ಕಷ್ಟ,” ಎನ್ನುತ್ತಾರೆ ಅಲ್ವರೆಜ಼್.
ತಮ್ಮಿಬ್ಬರ ನಡುವಿನ ಸಂಬಂಧ ಪರಸ್ಪರ ಸಹಮತದ್ದೇ ಆಗಿದ್ದರೂ ಸಹ ಒಮ್ಮೆ ಆತ ತನ್ನ ಮೇಲೆ ಅತ್ಯಾಚಾರವೆಸಗಿದ್ದಾಗಿ ಅಲ್ವರೆಜ಼್ ಆಪಾದನೆ ಮಾಡಿದ್ದಾರೆ.
“ಕ್ಯೂಬಾ ಸರ್ಕಾರ ಈ ವಿಷಯದಲ್ಲಿ ಭಾಗಿಯಾಗದೇ ಇದ್ದಲ್ಲಿ ಈ ಸಂಬಂಧವನ್ನು ನನ್ನ ಕುಟುಂಬ ಒಪ್ಪುತ್ತಿರಲಿಲ್ಲ. ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಜೊತೆಗೆ ಮರಡೋನಾ ಸ್ನೇಹವಿದ್ದ ಕಾರಣ ಅಷ್ಟು ದೊಡ್ಡ ವಯಸ್ಸಿನ ಅಂತರವಿದ್ದರೂ ಯಾರಿಗೂ ಒಳ್ಳೆಯದಲ್ಲದ ಈ ಸಂಬಂಧವನ್ನು ನನ್ನ ಮೇಲೆ ಹೇರಲಾಯಿತು,” ಎನ್ನುತ್ತಾರೆ ಅಲ್ವರೆಜ಼್. ಮರಡೋನಾ 2020ರ ನವೆಂಬರ್ 25ರಂದು ನಿಧನರಾದರು.