ಕಲಬುರಗಿ: ಸಿಟಿ ಸ್ಕ್ಯಾನ್ ಗೆ ಹೆಚ್ಚಿನ ಹಣ ವಸೂಲಿ ಮಾಡುವುದಕ್ಕೆ ತಡೆ ನೀಡಲು ಮುಂದಾಗಿರುವ ಸರ್ಕಾರ ಸಿಟಿ ಸ್ಕ್ಯಾನ್ ದರ ನಿಗದಿಪಡಿಸಲು ನಿರ್ಧರಿಸಿದೆ.
ಏಕರೂಪ ದರ ನಿಗದಿಪಡಿಸುವ ಮೂಲಕ ಬಡವರಿಗೆ ಅನುಕೂಲ ಕಲ್ಪಿಸಲು ಕ್ರಮ ಕೈಗೊಂಡಿದೆ. ಕೊರೋನಾ ಸೋಂಕಿತರಿಗೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಟಿ ಸ್ಕ್ಯಾನ್ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಲ್ಲಿ ಅಧಿಕ ಶುಲ್ಕ ಪಡೆಯುತ್ತಿರುವ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಂಡಿದ್ದು, ಬೇಕಾಬಿಟ್ಟಿ ಹಣ ವಸೂಲಿ ಮಾಡುವುದಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ತಜ್ಞರ ಸಮಿತಿ ವರದಿ ಪಡೆದು ಸಿಟಿ ಸ್ಕ್ಯಾನ್ ಸರ್ಕಾರದಿಂದಲೇ ದರ ನಿಗದಿ ಮಾಡಲಾಗುವುದು. ಬಡವರಿಗೆ ಆಗುತ್ತಿರುವಹೊರೆ ತಪ್ಪಿಸಲಾಗುವುದು ಎಂದು ಹೇಳಿದ್ದಾರೆ.
ಕೊರೋನಾ ಸೋಂಕಿನ ಲಕ್ಷಣಗಳಿದ್ದರೂ ಕೆಲವರಿಗೆ ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಾಗ ಸಿಟಿ ಸ್ಕ್ಯಾನ್ ಮಾಡಿಸಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ಇದನ್ನು ಕೆಲವು ಆಸ್ಪತ್ರೆ ಮತ್ತು ಪ್ರಯೋಗಾಲದವರು ದುರ್ಬಳಕೆ ಮಾಡಿಕೊಂಡು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸಿಟಿ ಸ್ಕ್ಯಾನ್ ಗೆ ಸರ್ಕಾರದಿಂದಲೇ ದರ ನಿಗದಿಪಡಿಸಲಾಗುವುದು ಎಂದು ಹೇಳಲಾಗಿದೆ.