ಬೆಂಗಳೂರು: ಕಾಂಗ್ರೆಸ್ ಸೇರಿದ ಮೇಲೆ ಸಿದ್ದರಾಮಯ್ಯನವರು ಆತ್ಮಸಾಕ್ಷಿಯನ್ನೇ ಮಾರ್ಕೊಂಡಿದ್ದಾರಾ? ಹೈಕಮಾಂಡ್ ಒತ್ತಡಕ್ಕೆ ಭ್ರಷ್ಟಾಚಾರ, ಲೂಟಿ ಮಾಡುವ ಅನಿವಾರ್ಯತೆ ಅವರಿಗೆ ಬಂದಿರಬೇಕು ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಿ.ಟಿ.ರವಿ, ಮುಡಾ ಹಗರಣದ ಬಗ್ಗೆ ನ್ಯಾಯಯುತ ತನಿಖೆಯಾಗಲಿ ಎಂದು ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ಅವರು ತನಿಖೆಗಷ್ಟೇ ಅನುಮತಿ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ನವರು ರಾಜ್ಯಪಾಲರ ಪ್ರತಿಕೃತಿ ದಹಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾರೆ. ದಲಿತ ಸಮುದಾಯದ ರಾಜ್ಯಪಾಲರನ್ನು ಕಾಂಗ್ರೆಸ್ ನವರು ನಿಂದಿಸಿದ್ದಾರೆ. ಪೊಲೀಸರು ಕಾಂಗ್ರೆಸ್ ನವರ ಮೇಲೆ ಅಟ್ರಾಸಿಟಿ ಕೇಸ್ ಹಾಕಬೇಕು ಎಂದು ಆಗ್ರಹಿಸಿದರು.
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಾಗ ಸಿದ್ದರಾಮಯ್ಯನವರು ಏನು ಹೇಳಿದ್ದರು ನೆನಪಿಸಿಕೊಳ್ಳಲಿ. ರಾಜ್ಯಪಾಲರು ಸಂವಿಧಾನಬದ್ಧ ತೀರ್ಮಾನ ಕೈಗೊಂಡಿದ್ದಾರೆ. ಯಡಿಯೂರಪ್ಪ ನ್ಯಾಯಯುತವಾಗಿ ರಾಜಿನಾಮೆ ಕೊಡಬೇಕು ಅಂದಿದ್ದರು. ಈಗ ಸಿಎಂ ಗೆ ಮರೆವಿನ ಕಾಯಿಲೆ. ಹಾಗಾಗಿ ಅಂದು ಅವರು ಮಾತನಾಡಿದ್ದನ್ನು ಇಂದು ನಾವು ಅವರಿಗೆ ನೆನಪಿಸಿಕೊಡುತ್ತೇವೆ. ಅದೇ ರಾಜಭವನ, ಅದೇ ಅಧಿಕಾರ ಇಂದಿನ ರಾಜ್ಯಪಾಲರಿಗೂ ಇದೆ. ಅಂದು ಪ್ರಾಸಿಕ್ಯೂಷನ್ ಯಡಿಯೂರಪ್ಪ ಮೇಲಿತ್ತು, ಇಂದು ನಿಮ್ಮ ಮೇಲಿದೆ. ಪಾತ್ರಧಾರಿಗಳಷ್ಟೇ ಬದಲು, ಅಂದು ನಿಮ್ಮ ಮಾತಿನಂತೆ ಇಂದು ನೀವು ರಾಜೀನಾಮೆ ಕೊಡಿ ಎಂದು ಹೇಳಿದ್ದಾರೆ.